ಮುಂಬೈ,ಡಿ 5 : ಕರ್ನಾಟಕದ ಕರಾವಳಿ , ಕೇರಳ ತಮಿಳುನಾಡಿನಲ್ಲಿ ತನ್ನ ಪ್ರಬಲ ಪ್ರಭಾವವನ್ನು ಬೀರಿದ್ದ ಓಖಿ ಚಂಡಮಾರುತ ಗುಜರಾತ್ ಮತ್ತು ಮಹಾರಾಷ್ಟ್ರಕ್ಕೆ ಇಂದು ಅಪ್ಪಳಿಸುವ ನಿರೀಕ್ಷೆ ಇದೆ. ಇದರ ಪೂರ್ವ ಲಕ್ಷಣವಾಗಿ ಮಂಗಳವಾರ ಮುಂಬೈ ನಗರ ಸುಂಟರ ಗಾಳಿಯ ತೀವ್ರ ಪ್ರತಾಪಕ್ಕೆ ನಲುಗುತ್ತಿದೆ.
ಓಖೀ ಚಂಡಮಾರುತ ಮುಂದಿನ 48 ತಾಸುಗಳಲ್ಲಿ ಅಪ್ಪಲಿಸುವ ಸಾಧ್ಯತೆ ಇರೋದ್ರಿಂದ ಅಕಾಲಿಕ ಮಳೆ ಸುರಿಯುತ್ತಿದೆ. ಹೀಗಾಗಿ ಮುಂಬೈಯಲ್ಲಿ ಜಡಿ ಮಳೆಯಲ್ಲಿ ತತ್ತರಿಸುವ ಭೀತಿ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ ಮಹಾರಾಷ್ಟ್ರಕ್ಕೆ ಇಂದು ಮಂಗಳವಾರ ಅತ್ಯಂತ ಪ್ರಬಲ ಓಖಿ ಚಂಡಮಾರುತ ಅಪ್ಪಳಿಸುವ ಬಗ್ಗೆ ಮುನ್ನೆಚ್ಚರಿಕೆಯನ್ನು ನೀಡಿದೆ. ಹೀಗಾಗಿ ಮಹಾರಾಷ್ಟ್ರದ ಹಲವೆಡೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಡಿ 5 ರ ಮಟ್ಟಿಗೆ ಮುಂಬೈಯಲ್ಲಿ ಶಾಲೆಗಳಿಗೆ ರಜೆ ಸಾರಲಾಗಿದೆ. ಇನ್ನು ಓಖಿಯ ಪ್ರಭಾವಕ್ಕೆ ಸಮುದ್ರದಲ್ಲಿ ಭಯಾನಕ ಗಾತ್ರದ ಎತ್ತರದ ಅಲೆಗಳು ಏಳುತ್ತಿದೆ. ಮುಂಬೈಯ ನಗರ ಪಾಲಿಕೆಯ ನೈಸರ್ಗಿಕ ಪ್ರಕೋಪ ನಿರ್ವಹಣಾ ಘಟಕ ಸಮುದ್ರ ತೀರದಲ್ಲಿ ಯಾರೂ ಸುಳಿದಾಡದಂತೆ ಎಚ್ಚರಿಕೆ ನೀಡಿದೆ.