ಕುಂದಾಪುರ, ಮಾ.28(DaijiworldNews/AK) : ಪರೀಕ್ಷೆಯಲ್ಲಿ ನನಗೆ ಪಾಸ್ ಆಗುವಷ್ಟು ಅಂಕಗಳು ಬೇಕು ಎಂದು ವಿದ್ಯಾರ್ಥಿ ಬೇಡಿಕೆ ಪಟ್ಟಿಯನ್ನು ಬರೆದು ದೇವರ ಕಾಣಿಕೆ ಡಬ್ಬಿಗೆ ಹಾಕಿರುವ ಘಟನೆ ಹಕ್ಲಾಡಿ ಸಮೀಪದ ಹೊಮ್ಮಿದೆ ಎಂಬಲ್ಲಿ ನಡೆದಿದೆ.

ತಾಲೂಕಿನ ಪ್ರಸಿದ್ಧ ದೈವಸ್ಥಾನಗಳಲ್ಲಿ ಒಂದಾದ ಹೊಳ್ಮಗೆ ಹೊರ್ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಯೊಳಗೆ ಈ ಮನವಿ ಪಟ್ಟಿ ಸಿಕ್ಕಿದ್ದು, ಮನವಿಯ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಹೊಳ್ಮಗೆ ಬೊಬ್ಬರ್ಯ ದೈವಸ್ಥಾನಕ್ಕೆ ಕುಂದಾಪುರ, ಬೈಂದೂರು ತಾಲೂಕಿನಲ್ಲಿ ಮಾತ್ರವಲ್ಲದೇ ಮುಂಬೈ, ಬೆಂಗಳೂರು ಮುಂತಾದ ಕಡೆಗಳಲ್ಲಿಯೂ ಈ ದೇವರನ್ನು ನಂಬಿರುವ ದೊಡ್ಡ ಭಕ್ತ ವರ್ಗ ಇದೆ. ಮಾ.14 ರಂದು ಈ ದೈವಸ್ಥಾನದ ವಾರ್ಷಿಕ ಹಾಲು ಹಬ್ಬ ಹಾಗೂ ಕೆಂಡಸೇವೆ ನಡೆದಿದ್ದು, ಇದಾದ ಬಳಿಕ ದೈವಸ್ಥಾನದ ಆಡಳಿತ ಮಂಡಳಿ, ಊರವರು ಹಾಗೂ ಭಕ್ತರ ಉಪಸ್ಥಿತಿಯಲ್ಲಿ ದೇವರ ಕಾಣಿಕೆ ಡಬ್ಬಿ ತೆರೆದಿದ್ದಾರೆ. ಈ ವೇಳೆ ಭಕ್ತರು ಹಾಕಿರುವ ಕಾಣಿಕೆ ಹಣದ ಜೊತೆ ಈ ವಿಚಿತ್ರ ಬೇಡಿಕೆ ಇರುವ ಪಟ್ಟಿ ಸಿಕ್ಕಿದೆ.
ಬೇಡಿಕೆ ಪಟ್ಟಿ ಬರೆದಿರುವವರು ಬೇಡಿಕೆ ಈಡೇರಿಸಲು ಕೋರಿಕೊಂಡಿದ್ದಾರೆ. ಪಾಸ್ ಮಾಡುವಂತೆ ಮನವಿ ಮಾಡಿರುವ ವಿದ್ಯಾರ್ಥಿ ಗಣಿತದಲ್ಲಿ 36-39, ಇಂಗ್ಲೀಷ್ನಲ್ಲಿ 37-39, ಕನ್ನಡದಲ್ಲಿ 39-40, ವಿಜ್ಞಾನದಲ್ಲಿ 38-39, ಹಿಂದಿಯಲ್ಲಿ 39-40 ಹಾಗೂ ಸಮಾಜದಲ್ಲಿ 37-38 ಅಂಕಗಳು ಸಿಗಲಿ ಎಂದು ಬರೆದಿದ್ದು ಪತ್ರದ ಮೇಲ್ಭಾಗದಲ್ಲಿ ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಇರಬೇಕು ದೇವರೇ ಹೊರ್ ಬೊಬ್ಬರ್ಯ ಎಂದು ಹಾಗೂ ಕೆಳ ಭಾಗದಲ್ಲಿ ಮತ್ತೆ ದೇವರೇ ಇದಕ್ಕಿಂತಲೂ ನನಗೆ ಕಡಿಮೆ ಬೇಡ ದೇವರೆ ಹೋರ್ ಬೊಬ್ಬರ್ಯ ಎಂದು ಬರೆದು ಕಾಣಿಕೆ ಡಬ್ಬಿಗೆ ಹಾಕಿದ್ದಾರೆ. ಪ್ರಸ್ತುತ ಪರೀಕ್ಷೆಗಳ ಕಾಲವಾಗಿರುವ ಕಾರಣ ಪರೀಕ್ಷೆ ಎದುರಿಸುತ್ತಿರುವ ಯಾವುದೋ ವಿದ್ಯಾರ್ಥಿಯ ಬೇಡಿಕೆ ಇದಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಇದು ಹುಡುಗ ಅಥವಾ ಹುಡುಗಿ ಬರೆದದ್ದೇ ಎಂಬುದು ಸ್ಪಷ್ಟವಾಗಿಲ್ಲ. ಯಾವುದೇ ತರಗತಿಯನ್ನು ಉಲ್ಲೇಖಿಸದಿದ್ದರೂ, ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುತ್ತಿರುವ ಎಸ್ಎಸ್ಎಲ್ಸಿ ವಿದ್ಯಾರ್ಥಿ ಆಗಿರಬಹುದೆಂದು ಶಂಕಿಸಲಾಗಿದೆ.. ಸದ್ಯ ಕಾಣಿಕೆ ಹುಂಡಿಯಲ್ಲಿ ದೊರೆತಿರುವ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.