ಉಡುಪಿ, ಮಾ.27 (DaijiworldNews/AA): ಉಡುಪಿ ತಾಲೂಕಿನ ಸಂತೆಕಟ್ಟೆ ಗ್ರಾಮದ ಪುತ್ತೂರಿನಲ್ಲಿ ಮಾರ್ಚ್ 26 ರಂದು ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿದೆ.

ದೂರುದಾರ ಜಾನ್ ಫೆರ್ನಾಂಡಿಸ್ (73) ಸಂತೆಕಟ್ಟೆಯಲ್ಲಿರುವ ತಮ್ಮ ಜಮೀನನ್ನು ಸ್ವಚ್ಛಗೊಳಿಸುತ್ತಿದ್ದಾಗ, ತಮ್ಮ ಮನೆಯಿಂದ 100 ಮೀಟರ್ ದೂರದಲ್ಲಿ ಕೊಳೆತ ದೇಹದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದರು. ಹತ್ತಿರ ಹೋಗಿ ನೋಡಿದಾಗ ಮಾವಿನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಮೃತದೇಹ ಕಂಡುಬಂದಿದೆ. ದೂರುದಾರರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸುಮಾರು 40 ರಿಂದ 45 ವರ್ಷ ವಯಸ್ಸಿನ ಗುರುತು ಸಿಗದ ಪುರುಷನ ಮೃತದೇಹವಿರಬಹುದು ಎಂದು ಪರಿಶೀಲನೆ ಬಳಿಕ ತಿಳಿಸಿದ್ದಾರೆ. ಸುಮಾರು ಎರಡು ತಿಂಗಳ ಹಿಂದೆ ಕೇಬಲ್ ತಂತಿಯನ್ನು ಬಳಸಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.