ಮಂಗಳೂರು, ಮಾ.27 (DaijiworldNews/AK):ವೈದ್ಯಕೀಯ ಪದವಿ ಕೋರ್ಸುಗಳ ಪ್ರವೇಶಕ್ಕೆ ಮೇ ತಿಂಗಳಲ್ಲಿ ನಡೆಯಲಿರುವ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.

ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಸಭೆಯಲ್ಲಿ ಮಾತನಾಡಿ, ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಮಾತ್ರ ನೀಟ್ ಪರೀಕ್ಷಾ ಕೇಂದ್ರಗಳಿವೆ. ಮೇ 4 ರಂದು ನೀಟ್ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ತಯಾರಿಸಿ ಪರೀಕ್ಷಾ ಕೇಂದ್ರಗಳ ಕೊಠಡಿಯಲ್ಲಿ ಸಿ.ಸಿ ಕ್ಯಾಮೆರಾದ ವ್ಯವಸ್ಥೆ ಹಾಗೂ ಪೀಠೋಪಕರಣದ ವ್ಯವಸ್ಥೆಯನ್ನು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಅವರು ಸೂಚಿಸಿದರು.
ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಮಾರ್ಗಸೂಚಿಗಳನ್ವಯ ಕಟ್ಟುನಿಟ್ಟಿನ ಸಿದ್ಧತೆಗಳನ್ನು ಕೈಗೊಳ್ಳಲು ಅವರು ಸೂಚಿಸಿದರು.ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ ಕುಮಾರ್ ಮಾತನಾಡಿ, ಮೇ 4ರಂದು ನಡೆಯುವ ನೀಟ್ ಪರೀಕ್ಷೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 21 ಪರೀಕ್ಷಾ ಕೇಂದ್ರಗಳಿದ್ದು, 9080 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದರು. ನೀಟ್ ಪರೀಕ್ಷೆ ಸುಗಮವಾಗಿ ನಡೆಯಲು ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಅಭ್ಯರ್ಥಿಗಳ ತಪಾಸಣೆ ಸೇರಿದಂತೆ ವಿವಿಧ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.