ಮಂಗಳೂರು, ಜೂ16(Daijiworld News/SS): ಹಾಸ್ಟೆಲ್ಗಳಲ್ಲಿ ತರಕಾರಿ ಅನ್ನಾಹಾರದ ಗುಣಮಟ್ಟಕ್ಕೆ ಆದ್ಯತೆ ಕೊಡವುದರ ಜೊತೆಗೆ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಸಕಾಲದಲ್ಲಿ ಸಿಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಮತ್ತು ಐಟಿಡಿಪಿ ಇಲಾಖೆಯ ಹಾಸ್ಟೆಲ್ಗಳ ಪ್ರಗತಿ ಪರಿಶೀಲನೆ ಮತ್ತು ಮಳೆ ಹಾನಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಲಯನ್ಸ್, ರೋಟರಿ, ಜೇಸಿಸ್, ಮಹಿಳಾ ಮಂಡಲ ಸೇರಿದಂತೆ ಪ್ರತಿಷ್ಠಿತ ಸರಕಾರೇತರ ಸಂಘಗಳಿಗೆ ಆಯಾ ಊರಿನ ಹಾಸ್ಟೆಲ್ಗಳ ಮೇಲೆ ನಿಗಾ ವಹಿಸಿ ನಿರ್ವಹಣೆ ಮಾಡಿಸುವ ಬಗ್ಗೆ ಚಿಂತನೆ ನಡೆಸಬೇಕು. ಹಾಸ್ಟೆಲ್ಗಳಲ್ಲಿ ತರಕಾರಿ ಅನ್ನಾಹಾರದ ಗುಣಮಟ್ಟಕ್ಕೆ ಆದ್ಯತೆ ಕೊಡಬೇಕು. ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಸಕಾಲದಲ್ಲಿ ಸಿಗಬೇಕು ಎಂದು ಸಲಹೆ ನೀಡಿದರು.
ಸರಕಾರದ ಮಟ್ಟದಲ್ಲಿ ಹಾಸ್ಟೆಲ್ಗಳ ನಿರ್ವಹಣೆ ಗುಣಮಟ್ಟದಲ್ಲಿ ನಡೆಯುತ್ತಿದೆ. ಆದರೆ, ಆಯಾ ಊರಿನ ಜನರಿಗೂ ಜವಾಬ್ದಾರಿ ಕೊಡುವುದು ಉತ್ತಮ. ಆಗ ಹಾಸ್ಟೆಲ್ಗಳಲ್ಲಿ ತಿಂಗಳಿಗೊಂದು ಉತ್ತಮ ಕಾರ್ಯಕ್ರಮ, ನಾನಾ ಸೌಲಭ್ಯ ಕಲ್ಪಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಿಬ್ಬಂದಿ ಕೊರತೆ ಇರುವಲ್ಲಿ ಹೊರ ಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳಿ. ನಗರದ ಮಧ್ಯದ ಪಿವಿಎಸ್ನ ಕುದ್ಮುಲ್ ರಂಗ ರಾವ್ ಹಾಸ್ಟೆಲ್ ಎದುರು ವಾಣಿಜ್ಯ ಸಂಕೀರ್ಣ ನಿರ್ಮಿಸಿದರೆ, ಇಲಾಖೆಗೆ ಆದಾಯ ಬರಲಿದೆ ಎಂದು ಹೇಳಿದರು.