ಬಂಟ್ವಾಳ, ಜೂ 15 (Daijiworld News/SM): ಕೇವಲ ಬಂಟ್ವಾಳ ತಾಲೂಕೊಂದರಲ್ಲೇ ಸುಮಾರು ೩೮.೮೨ ಕೋಟಿ ರೂಪಾಯಿ ಸಾಲಮನ್ನಾ ಆಗಿದ್ದರೂ ಸರಕಾರ ಏನು ಮಾಡಿಲ್ಲ. ಸರಕಾರ ಸತ್ತಿದೆ ಎಂದು ವಿಪಕ್ಷಗಳು ಅಪಪ್ರಚಾರ ಮಾಡುತ್ತಿವೆ. ಇದೇನು ಅಭಿವೃದ್ಧಿ ಕಾರ್ಯಗಳಲ್ಲವೇ? ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ ಪ್ರಶ್ನಿಸಿದ್ದಾರೆ.
ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ಆಡಳಿತ ಪಕ್ಷದಷ್ಟೇ ವಿರೋಧಪಕ್ಷಗಳಿಗೂ ಜವಾಬ್ದಾರಿ ಇದ್ದು ಸುಳ್ಳು ಆರೋಪ ಮಾಡಿ ಅಹೋರಾತ್ರಿ ಧರಣಿ ಮಾಡುವ ಬದಲು ವಿರೋಧ ಪಕ್ಷದವರೂ ಪ್ರಗತಿಪರಿಶೀಲನೆ ಮಾಡಿದಾಗ ಸತ್ಯಾಂಶ ಏನೆಂದು ಗೊತ್ತಾಗಲಿದೆ ಎಂದರು.
ಈ ಸರಕಾರ ಬಡವರ ಪರವಾಗಿದೆ. ಬಡವರಿಗಾಗಿ ಹಾಕಿಕೊಂಡಿರುವ ಕಾರ್ಯಕ್ರಮಗಳನ್ನು ಸರಕಾರ ಈಡೇರಿಸುತ್ತಿದೆ. ಕಂದಾಯ ಇಲಾಖೆ ಜನರ ಮನೆಬಾಗಿಲಿಗೆ ಹೋಗುವ ಕಾರ್ಯ ಮಾಡುತ್ತಿದೆ ಎಂದರು.
ಯೋಜನೆಗಳನ್ನು ಜನರಿಗೆ ನೇರವಾಗಿ ತಲುಪಿಸಲು ಹಾಗೂ ಕಂದಾಯ ಇಲಾಖೆಯ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ರಾಜ್ಯದ ಬರ ಪರಿಹಾರದ ವಿಚಾರದಲ್ಲೂ ವಿಪಕ್ಷಗಳು ಜನರಿಗೆ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದೆ. ಶಿವಮೊಗ್ಗದಲ್ಲಿ ಸಹಕಾರಿ ಬ್ಯಾಂಕ್ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಿದ್ದು, ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿರುವ ಖಾತೆಗಳಿಗೆ ನೇರವಾಗಿ ಜಮೆ ಮಾಡುವ ಮೂಲಕ ರೈತರಿಗೆ ಸರಕಾರ ನೆರವಾಗಿದೆ ಎಂದರು.