ಕಡಬ, ಮಾ.25(DaijiworldNews/TA): ಕೊರುಂದೂರಿನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ವ್ಯಕ್ತಿಗಳು ಒಟ್ಟಿಗೆ ಆಹಾರ ಸವಿದು ಮತಸೌಹಾರ್ದತೆ ಪ್ರದರ್ಶಿಸಿದ್ದಾರೆ. ಇತ್ತೀಚೆಗೆ ಗ್ರಾಮದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ಯುವ ಸಮುದಾಯದ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಇಫ್ತಾರ್ ಕೂಟಗಳು, ಧರ್ಮವೆಂದರೆ ಅದು ಸಾಮರಸ್ಯ, ಪ್ರೀತಿ ಮತ್ತು ಸಾಮರಸ್ಯವನ್ನು ಸಾರಬೇಕು ಎಂಬ ಸಂದೇಶವನ್ನು ಸಾರುತ್ತಿದೆ.

ಈ ನಿಟ್ಟಿನಲ್ಲಿ ಕಡಬದ ಕೊರುಂದೂರು ಎಂಬಲ್ಲಿ ಮುಸ್ಲಿಂ ಸಮುದಾಯದ ಯುವಕರು ಸರ್ವಧರ್ಮೀಯನ್ನು ಆಹ್ವಾನಿಸುವ ಮೂಲಕ ಎರಡನೇ ಯೂತ್ ಫ್ರೆಂಡ್ಸ್ ಕೊರುಂದೂರು ಇದರ ಎರಡನೇ ವರ್ಷದ ಇಫ್ತಾರ್ ಕೂಟವನ್ನು ನಡೆಸಿ ಮಾದರಿಯಾದರು.
ಈ ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಜನರು ಭಾಗವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಾರ್ಥನೆ ಮೂಲಕ ಉಸ್ತಾದ್ ಮಹಮ್ಮದ್ ಮುಸ್ತಫಾ ಇರ್ಫಾನಿ ನೆರವೇರಿಸಿ ಮಾತನಾಡಿ, ಕಾರ್ಯಕ್ರಮದ ಆಹ್ವಾನವನ್ನು ಸ್ವೀಕರಿಸಿ ಆಗಮಿಸಿದ ಎಲ್ಲರಿಗೂ ನಾವು ಕೃತಜ್ಞರಾಗಿರುತ್ತೇವೆ, ಕಳೆದ ವರ್ಷ ಇದೇ ರೀತಿಯಲ್ಲಿ ಇಫ್ತಾರ್ ಕೂಟ ನಡೆಸಿರುತ್ತೇವೆ ಎಲ್ಲರೂ ಬಂದು ಸಹಕರಿಸಿದ್ದಾರೆ ಅಹ್ವಾನಿಸಿದಾಗ ಬರುವುದೇ ಅತೀ ದೊಡ್ಡ ಸಹಕಾರ ಎಂದು ತಿಳಿಸಿದರು.