ಬಂಟ್ವಾಳ, ಜೂ 15 (Daijiworld News/SM): ಬಂಟ್ವಾಳ ತಾಲೂಕು ನಿವೃತ್ತ ತಹಸಿಲ್ದಾರ್ ಟಿ. ಎನ್. ನಾರಾಯಣ ರಾವ್ ಅವರ ವಿರುದ್ಧ ಲಂಚ ಸ್ವೀಕಾರ ಆರೋಪ ಸಾಬೀತಾಗಿದ್ದು, ಕೋರ್ಟ್ ಅವರಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
2012 ರಲ್ಲಿ ಗನ್ ಲೈಸನ್ಸ್ ತಂದೆಯಿಂದ ಮಗನ ಹೆಸರಿಗೆ ವರ್ಗಾಯಿಸಲು ಬಂಟ್ವಾಳದ ಸತೀಶ್ ಪ್ರಭು ಎಂಬವರಿಂದ 3,000 ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟು2,000 ರೂಪಾಯಿ ಲಂಚವನ್ನು ಸ್ವೀಕರಿಸುತ್ತಿದ್ದಾಗ ಮಂಗಳೂರು ಲೋಕಾಯುಕ್ತ ಬಲೆಗೆ ಬಿದ್ದಿದ್ದರು.
ಆರೋಪಿಯನ್ನು ಬಂದಿಸಿ, ಆರೋಪಿಯ ವಶದಲ್ಲಿದ್ದ ಅಕ್ರಮವಾಗಿ ಸಂಗ್ರಹಿಸಿದ ನಗದನ್ನು ವಶಪಡಿಸಿಕೊಂಡಿದ್ದರು. ವಿಚಾರಣೆ ನಡೆಸಿದ ಮಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವು ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್. ಎನ್. ರಾಜೇಶ್ ರವರ ವಾದವನ್ನು ಪುರಸ್ಕರಿಸಿ, ಆರೋಪಿಯ ಮೇಲಿನ ಆರೋಪ ಸಾಬೀತು ಪಡಿಸಿದೆ.
ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳಿಧರ ಪೈ ಅವರು ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.
ಭ್ರಷ್ಟಾಚಾರ ನಿಗ್ರಹ ಖಾಯಿದೆಯ ಕಲಂ 7 ರಡಿಯಲ್ಲಿ ಎಸಗಿದ ಅಪರಾಧಕ್ಕೆ ಆರೋಪಿಗೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ ವಿಧಿಸಲಾಗಿದೆ. ಇನ್ನು ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ 1 ವರ್ಷ ಸಾದಾ ಸಜೆ ಮತ್ತು 10,000/- ದಂಡ ವಿಧಿಸಲಾಗಿದೆ.