ಬಂಟ್ವಾಳ, ಮಾ.21(DaijiworldNews/AK):ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ತಾಲೂಕಿನ ಆರೋಗ್ಯ ಅಧಿಕಾರಿಗಳ ಸಹಯೋಗದೊಂದಿಗೆ ತಂಬಾಕು ನಿಯಂತ್ರಣ ಕಾಯ್ದೆ ಅನ್ವಯ ಬಂಟ್ವಾಳ ತಾಲೂಕಿನ ತಂಬಾಕು ಮಾರಾಟ ಮಾಡುವ ಅಂಗಡಿಗಳ ಸಹಿತ ಇತರ ಅಂಗಡಿಗಳಿಗೆ ದಿಡೀರ್ ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಅಧಿಕಾರಿಗಳು ಕಾನೂನು ಬಾಹಿರವಾಗಿ ವ್ಯವಹಾರ ನಡೆಸಿದ ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ.


ಬಂಟ್ವಾಳದ 20 ಕ್ಕೂ ಅಧಿಕ ಅಂಗಡಿಗಳ ಮಾಲಕರಿಂದ ಸುಮಾರು 3,350 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಟ್ವಾಳ, ಬಿಸಿರೋಡು, ಹಾಗೂ ಪಾಣೆಮಂಗಳೂರು ಪೇಟೆಯಲ್ಲಿರುವ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ನಿಯಮ ಪಾಲನೆ ಮಾಡದೆ ಕಾನೂನು ಬಾಹಿರವಾಗಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ಧ ಮಾಲೀಕರಿಗೆ ದಂಡ ವಿಧಿಸಿದ್ದಲ್ಲದೆ, ಮುಂದುವರಿದರೆ ಪ್ರಕರಣ ದಾಖಲಿಸಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ.
ಬೀಡಿ ಸಿಗರೇಟು ಸೇದುವ ಬೆಂಕಿಪೆಟ್ಟಿಗೆಯನ್ನು ಅಥವಾ ಲೈಟರ್ ಗಳನ್ನು ಸಾರ್ವಜನಿಕರ ಕೈಗೆ ಸಿಗುವಂತೆ ಇಡುವಂತಿಲ್ಲ, ತಂಬಾಕು ಉತ್ಪನ್ನಗಳನ್ನು ಜಾಹೀರಾತು ಶೈಲಿಯಲ್ಲಿ ಅಂಗಡಿಗಳಲ್ಲಿ ನೇತು ಹಾಕುವಂತಿಲ್ಲ, ವಿದೇಶಿ ಸಿಗರೇಟ್ ಮಾರುವಂತಿಲ್ಲ, ಪ್ಯಾಕೆಟ್ ಹೊರತುಪಡಿಸಿ ಬಿಡಿಬಿಡಿಯಾಗಿ ಅಥವ ಚಿಲ್ಲರೆ ರೂಪದಲ್ಲಿ ಬೀಡಿ ಸಿಗರೇಟು ಮಾರುವಂತಿಲ್ಲ ಎಂಬುದನ್ನು ಮನವರಿಕೆ ಮಾಡಿದ್ದಾರೆ.
ಕಡ್ಡಾಯವಾಗಿ ಇಲಾಖೆಯ ಸೂಚನೆಯನ್ನು ಪಾಲಿಸುವ ಧೂಮಪಾನ ನಿಷೇಧ ಪೋಸ್ಟರ್ ನ್ನು ಅಂಗಡಿಗಳಲ್ಲಿ ಅಂಟಿಸಬೇಕು ಎಂದು ತಿಳಿಸಿದ್ದಾರೆ.