ಮಂಗಳೂರು, ಮಾ.17(DaijiworldNews/TA): ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಪ್ಲಾಸ್ಟಿಕ್ ಫ್ಲೆಕ್ಸ್ ಗಳಿಗೆ ನಿಷೇಧ ಹೇರಲಾಗಿದ್ದು, ಸದ್ಯ ಇಂದಿನಿಂದ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ಮಂಗಳೂರಿನ ಕ್ಲಾಕ್ ಟವರ್, ಎಂಜಿ ರಸ್ತೆ, ಡಿಸಿ ಬಂಗ್ಲೆ ಮುಂತಾದ ಕಡೆಗಳಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಫ್ಲೆಕ್ಸ್ ಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಗುತ್ತಿದೆ.



ಇನ್ನು ನಿಯಮ ಮೀರಿ ಫ್ಲೆಕ್ಸ್ ಅಳವಡಿಸಿದರೆ ಪಾಲಿಕೆ ಅಧಿಕಾರಿಗಳು ಆರಂಭಿಕ ಹಂತದಲ್ಲಿ 2000 ರೂ. ದಂಡ ವಿಧಿಸಲಿದ್ದಾರೆ. ಒಂದು ವೇಳೆ ಮತ್ತೆ ಅಳವಡಿಸಿದರೆ 4000 ರೂ. ದಂಡ ವಸೂಲಿ ಮಾಡಲಿದ್ದಾರೆ. ಆದರೆ ಮತ್ತೆ ಪುನರಾವರ್ತನೆಯಾದರೆ ಮುದ್ರಣಾಲಯದ ಟ್ರೇಡ್ ಲೈಸೆನ್ಸ್ ರದ್ದುಗೊಳಿಸಿ, ಬೀಗ ಜಡಿಯುವ ಕಠಿಣ ನಿರ್ಧಾರಕ್ಕೆ ಪಾಲಿಗೆ ಬಂದಿದೆ.
ಇನ್ನು ಸಾರ್ವಜನಿಕರು ಕೂಡ ಎಲ್ಲೇ ಆದರೂ ಪ್ಲಾಸ್ಟಿಕ್ ಫ್ಲೆಕ್ಸ್ ಕಂಡುಬಂದರೆ ಸಹಾಯವಾಣಿಗೆ ಕರೆ ಮಾಡಬಹುದು. ಚಿತ್ರಗಳನ್ನು ತೆಗೆದು ವಾಟ್ಸ್ಯಾಪ್ ಮೂಲಕ ಕಳುಹಿಸುವ ಅವಕಾಶವನ್ನೂ ಪಾಲಿಕೆ ಒದಗಿಸಿದೆ. ಸದ್ಯಕ್ಕೆ ಪ್ಲಾಸ್ಟಿಕ್ ಫ್ಲೆಕ್ಸ್ ಗೆ ಮಾತ್ರ ನಿಷೇಧ ಹೇರಲಾಗಿದೆ. ಆದರೆ ಬಟ್ಟೆ, ಬ್ಯಾನರ್ ಗಳನ್ನು ಪಾಲಿಕೆಯಿಂದ ಅನುಮತಿ ಪಡೆದು ನಿಗದಿತ ಜಾಗದಲ್ಲಿ ಹಾಕಲು ಅವಕಾಶವಿದೆ. ಬಟ್ಟೆಯ ಬ್ಯಾನರ್ ಅಳವಡಿಕೆಗೆ 200 ರೂ. ಪಾಲಿಕೆಗೆ ಪಾವತಿಸಿ, 15 ದಿನಗಳ ಅನುಮತಿ ಪಡೆಯಬೇಕು. ಬ್ಯಾನರ್ ಗಳಲ್ಲಿ ಮುದ್ರಕರ ಹೆಸರು, ದೂರವಾಣಿ ಸಂಖ್ಯೆ ಕಡ್ಡಾಯವಾಗಿದೆ.