ಉಡುಪಿ, ಮಾ.17(DaijiworldNews/TA) : ಹೆಬ್ರಿ ತಾಲ್ಲೂಕಿನ ಸೀತಾನದಿಗೆ ಕಿಡಿಗೇಡಿಗಳು ಕೋಳಿ ತ್ಯಾಜ್ಯವನ್ನು ಕುಚ್ಚೂರು ಮಠದಬೆಟ್ಟು ಸೇತುವೆ ಬಳಿ ಎಸೆದ ಘಟನೆ ನಡೆದಿದೆ. ಸದ್ಯ ಕಿಡಿಗೇಡಿಗಳ ಕೃತ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇತುವೆ ಪಕ್ಕದಲ್ಲಿ ನಿರಂತರವಾಗಿ ಕೋಳಿ ತ್ಯಾಜ್ಯ ಎಸೆಯುತ್ತಾರೆ. ಅವರನ್ನು ಹಿಡಿಯುವುದು ಪಂಚಾಯಿತಿಗೂ ಸವಾಲಾಗಿದೆ.

ತಾಲ್ಲೂಕಿನಾದ್ಯಂತ ಕೋಳಿ ಅಂಗಡಿ ಮಾಲಕರು ಸಿಕ್ಕ ಸಿಕ್ಕಲ್ಲಿ ಕೋಳಿ ತ್ಯಾಜ್ಯ ಎಸೆಯುತ್ತಾರೆ. ತ್ಯಾಜ್ಯ ಎಸೆದ ಸಮೀಪದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇದೆ. 4 ಗ್ರಾಮ ಪಂಚಾಯಿತಿಗಳಿಗೆ ನೀರು ಸರಬರಾಜು ಆಗುತ್ತದೆ.
ಸಾವಿರಾರು ಮಂದಿ ಕುಡಿಯಲು ಬಳಸುವ ನೀರಿಗೆ ತ್ಯಾಜ್ಯ ಹಾಕುವುದನ್ನು ತಡೆಯಲು ಕಠಿಣ ನಿಯಮ ರೂಪಿಸಬೇಕಾಗಿದೆ. ಸೀತಾನದಿ ಪ್ರಮುಖ ಪ್ರದೇಶದ ಸುತ್ತಮುತ್ತ ನಿರಂತರವಾಗಿ ಕೋಳಿ ತ್ಯಾಜ್ಯ, ಇನ್ನಿತರ ಕಸವನ್ನು ಎಸೆಯಲಾಗುತ್ತಿದೆ. ಅವರನ್ನು ಪತ್ತೆಹಚ್ಚಲು ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.