ಮಂಗಳೂರು, ಮಾ.15 (DaijiworldNews/AA): ಪಾಲಿಕೆ ವ್ಯಾಪ್ತಿಯಲ್ಲಿ ಮನೆ, ಅಪಾರ್ಟ್ಮೆಂಟ್, ವ್ಯಾಪಾರಸ್ಥರು, ಕೈಗಾರಿಕೆಗಳಿಂದ ಒಳಚರಂಡಿ ಜಾಲಕ್ಕೆ ಮಳೆ ನೀರನ್ನು ಹರಿಯಬಿಟ್ಟರೆ ಕಾನೂನು ಕ್ರಮದ ಜೊತೆಗೆ ದಂಡ ವಿಧಿಸುವುದಾಗಿ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು, ಕೆಲವೆಡೆ ಒಳಚರಂಡಿ ಜಾಲಕ್ಕೆ ಮಳೆ ನೀರು ಹರಿಯಬಿಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಒಳಚರಂಡಿ ಜಾಲದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಳೆ ನೀರು ಹರಿದು ಮೆಶಿನ್ ಹೋಲ್ಗಳಿಂದ ಒಳಚರಂಡಿ ನೀರು ಹೊರ ಬಂದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ರೀತಿ ಒಳಚರಂಡಿ ಜಾಲಕ್ಕೆ ಮಳೆ ನೀರು ಹರಿಯ ಬಿಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗಾಗಿ ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ ಅಥವಾ ಮೆಶಿನ್ ಹೋಲ್ಗಳಿಗೆ ನೀಡಿರುವ ಕಟ್ಟಡದ ಮಳೆ ನೀರು ಸಂಪರ್ಕವನ್ನು ಕಡ್ಡಾಯವಾಗಿ ತೆರವುಗೊಳಿಸಬೇಕು ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಪಾಲಿಕೆಯ ಅಧಿಕಾರಿ ಅಥವಾ ಸಿಬ್ಬಂದಿ ಅನಧಿಕೃತ ಜೋಡಣೆ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತಾರೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸಂಬಂಧಿತ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ. ಮೊದಲ ಬಾರಿಗೆ 5,000 ರೂ. ದಂಡ ವಿಧಿಸಲಾಗುವುದು. ನೋಟೀಸು ನೀಡಿದ ಬಳಿಕವೂ ತೆರವುಗೊಳಿಸದಿದ್ದರೆ ಪ್ರತಿದಿನ 1,000 ರೂ.ನಂತೆ ಹೆಚ್ಚುವರಪಿ ದಂಡ ವಿಧಿಸಲಾಗುವುದು. ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು. ಅನಧಿಕೃತ ಜೋಡಣೆಯನ್ನು ಪಾಲಿಕೆ ವತಿಯಿಂದ ತೆರವುಗೊಳಿಸಿ ಕಾರ್ಯಾಚರಣೆಗೆ ತಗಲುವ ಮೊತ್ತವನ್ನು ಕಟ್ಟಡದ ಮಾಲಕರಿಂದ ದಂಡ ವಿಧಿಸಿ ಹೆಚ್ಚುವರಿ 25,000 ರೂ. ದಂಡ ವಿಧಿಸಲಾಗುವುದು. ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು. ಅನಧಿಕೃತ ಜೋಡಣೆ ಕಂಡು ಬಂದಲ್ಲಿ ಸಾರ್ವಜನಿಕರು 0824- 2220306, ವಾಟ್ಸಾಪ್ ಸಂ. 9449007722 ಗೆ ಮಾಹಿತಿ ನೀಡಿ ಮಂಗಳೂರು ನಗರ ಸ್ವಚ್ಛ ನಗರವನ್ನಾಗಿಸಲು ಪಾಲಿಕೆಯೊಂದಿಗೆ ಕೈಜೋಡಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಮನೆಗಳು, ಅಪಾರ್ಟ್ಮೆಂಟ್ಗಳು, ವ್ಯಾಪಾರ ಸ್ಥರು, ಕೈಗಾರಿಕೆಗಳವರು ಮಳೆಯ ನೀರಿನ ಚರಂಡಿಗೆ ಒಳಚರಂಡಿ ನೀರು ಹರಿಸುತ್ತಿರುವುದು ಕೂಡಾ ಪಾಲಿಕೆಯ ಗಮನಕ್ಕೆ ಬಂದಿದೆ. ಇದರಿಂದ ನೀರಿನ ಮೂಲಕ ಕಲುಷಿತಗೊಂಡು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಅಕ್ರಮ ಕಡ್ಡಯವಾಗಿ ನಿಷೇಧಿಸಲ್ಪಟ್ಟಿದ್ದು, ಅಧಿಕಾರಿ ಅಥವಾ ಸಿಬ್ಬಂದಿಯ ಪರಿಶೀಲನೆಯ ವೇಳೆ ನಿಯಮ ಉಲ್ಲಂಘನೆ ಕಂಡು ಬಂದರೆ ಕ್ರಮ ವಹಿಸಲಾಗುತ್ತದೆ ಎಂದು ಮನಪಾ ತಿಳಿಸಿದೆ.
ಮಳೆ ನೀರನ್ನು ಒಳಚರಂಡಿಗೆ ಬಿಡುವವರ ವಿರುದ್ಧ ಕೈಗೊಳ್ಳಲಾಗುವ ಕ್ರಮವನ್ನು ಇಂತಹ ಪ್ರಕರಣಗಳಲ್ಲಿಯೂ ಮಾಡಲಾಗುತ್ತದೆ. ಮಾತ್ರವಲ್ಲದೆ ಒಳಚರಂಡಿ ನೀರನ್ನು ಮಳೆ ನೀರು ಚರಂಡಿಗೆ ನೀಡಿರುವುದು ಕಂಡು ಬಂದಲ್ಲಿ ಮಾಲಿನ್ಯ ನಿಯಂತ್ರಣ ತಡೆ ಕಾಯ್ದೆಯಡಿ ಕಟ್ಟಡ ಮಾಲಕರಿಗೆ 1 ಲಕ್ಷ ರೂ. ದಂಡ ಹಾಗೂ 6 ವರ್ಷದವರೆಗೆ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ. ಮಾತ್ವರಲ್ಲದೆ ಪರಿಸರ ಸಂರಕ್ಷಣೆ ಕಾಯ್ದೆಯಡಿ 1 ಲಕ್ಷ ರೂ. ದಂಡ ಹಾಗೂ 5 ವರ್ಷ ಜೈಲು ಶಿಕ್ಷೆಗೆ ಒಳಪಡಿಸಬಹುದು ಎಂದು ಮನಪಾ ಹೇಳಿದೆ.