ಮಂಗಳೂರು, ಮಾ.15(DaijiworldNews/TA): ಕರಾವಳಿಯಲ್ಲಿ ಒಂದೆಡೆ ಭತ್ತದ ಬೆಳೆಯ ಪ್ರಮಾಣ ನಿಧಾನವಾಗಿ ಕಡಿಮೆಯಾಗುತ್ತಿದ್ದರೆ ಇದೀಗ ಇಲ್ಲಿನ ಪ್ರಮುಖ ತೋಟಗಾರಿಕೆ ಬೆಳೆ ಎಂದೇ ಗುರುತಿಸಿಕೊಂಡಿರುವ ಗೇರುಬೀಜ ಬೆಳೆಯಲ್ಲಿ ರೈತರು ಆಸಕ್ತಿ ಕಳೆದುಕೊಳ್ಳುತ್ತಿರುವ ಸಂಗತಿ ಹೊರಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ವರ್ಷಗಳ ಹಿಂದೆ 15 ಸಾವಿರ ಹೆಕ್ಟೇರ್ ವ್ಯಾಪ್ತಿಯಲ್ಲಿದ್ದ ಗೇರು ಬೀಜ ಬೆಳೆ ಈಗ 8 ಸಾವಿರ ಹೆಕ್ಟೇರ್ಗೆ ಕುಸಿದಿದೆ. ಜಿಲ್ಲೆಯಲ್ಲಿ ಆರಂಭದಲ್ಲಿ ಭತ್ತದ ಬೆಳೆಗೆ ಹೆಚ್ಚಿನ ಆಸಕ್ತಿ ನೀಡಲಾಗುತ್ತಿತ್ತು. ಬಳಿಕ ಅಡಿಕೆ, ತೆಂಗು, ರಬ್ಬರ್, ಗೇರು ಮುಂತಾದ ವಾಣಿಜ್ಯ ಬೆಳೆಗಳಿಗೆ ರೈತರು ಮುಂದಾಗಿದ್ದರು.
ಅಡಿಕೆಗೆ ಉತ್ತಮ ಧಾರಣೆ ಸಿಗಲು ಆರಂಭವಾದ ಬಳಿಕ ಬಹುತೇಕರು ಅದರತ್ತಲೇ ಹೆಚ್ಚಿನ ಗಮನ ಹರಿಸಿದರು. ಜಿಲ್ಲೆಯಲ್ಲಿ ಈ ಹಿಂದೆ ಹೆಚ್ಚಿನ ಪ್ರಮಾಣದಲ್ಲಿ ಗೇರು ಬೆಳೆಯನ್ನು ಮಾಡಲಾಗುತ್ತಿತ್ತು. ಬೇಸಗೆ ಯಲ್ಲಿ ಮಾತ್ರವೇ ಇಳುವರಿ ನೀಡುವ ಗೇರು ಒಂದೊಮ್ಮೆ ಉತ್ತಮ ಧಾರಣೆಯನ್ನೂ ನೀಡಿತ್ತು. ಇಂದಿಗೂ ಈ ಭಾಗದ ಗೇರು ಬೀಜಕ್ಕೆ ಉತ್ತಮ ಬೇಡಿಕೆ ಇದೆ. ಆದರೆ ಈಗ ವರ್ಷದಿಂದ ವರ್ಷಕ್ಕೆ ಗೇರುಬೆಳೆ ಕುಸಿತ ಕಾಣುತ್ತಿದೆ.
2023-24ರಲ್ಲಿ ಬಂಟ್ವಾಳ ತಾಲೂಕಿನಲ್ಲಿ 898 ಹೆಕ್ಟೇರ್ ವ್ಯಾಪ್ತಿಯಲ್ಲಿ 685 ಮೆಟ್ರಿಕ್ ಟನ್, ಬೆಳ್ತಂಗಡಿಯಲ್ಲಿ 2,853 ಹೆಕ್ಟೇರ್ನಲ್ಲಿ 2,162 ಮೆಟ್ರಿಕ್ ಟನ್, ಕಡಬದಲ್ಲಿ 1,584 ಹೆಕ್ಟೇರ್ನಲ್ಲಿ 1,200 ಮೆಟ್ರಿಕ್ ಟನ್., ಮಂಗಳೂರಿನಲ್ಲಿ 19 ಹೆಕ್ಟೇರ್ನಲ್ಲಿ 15 ಮೆಟ್ರಿಕ್ ಟನ್., ಮೂಡುಬಿದಿರೆಯಲ್ಲಿ 820 ಹೆಕ್ಟೇರ್ನಲ್ಲಿ 631 ಮೆಟ್ರಿಕ್ ಟನ್., ಮೂಲ್ಕಿಯಲ್ಲಿ 2.65 ಹೆಕ್ಟೇರ್ನಲ್ಲಿ 2 ಮೆಟ್ರಿಕ್ ಟನ್., ಪುತ್ತೂರಿನಲ್ಲಿ 2,166 ಹೆಕ್ಟೇರ್ನಲ್ಲಿ 1,629 ಮೆಟ್ರಿಕ್ ಟನ್., ಸುಳ್ಯದಲ್ಲಿ 405 ಹೆಕ್ಟೇರ್ನಲ್ಲಿ 306 ಮೆಟ್ರಿಕ್ ಟನ್., ಉಳ್ಳಾಲದಲ್ಲಿ 10 ಹೆಕ್ಟೇರ್ನಲ್ಲಿ 7 ಮೆಟ್ರಿಕ್ ಟನ್. ಗೇರು ಉತ್ಪಾದನೆ ದಾಖಲಾಗಿದೆ.