ಮಂಗಳೂರು, ಜೂ 15 (Daijiworld News/MSP): ರಮಾನಾಥ ರೈ ಸಚಿವರಾಗಿದ್ದ ಸಂದರ್ಭ ಅಸೈಗೋಳಿಯಲ್ಲಿ ನಡೆದಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಯುವ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ ಬಗ್ಗೆ ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ರಹೀಂ ಉಜ್ಜಿಲ್ ಅವರು ನಗರದ ಜೆಎಂಎಫ್ಸಿ 2ನೇ ನ್ಯಾಯಾ ಲಯದಲ್ಲಿ ದಾಖಲಿಸಿದ್ದ ದೂರನ್ನು ಸ್ವೀಕರಿಸಲಾಗಿದ್ದು ಮುಂದಿನ ತಿಂಗಳು ಕೋರ್ಟಿಗೆ ಹಾಜರಾಗಲು ರಮಾನಾಥ ರೈಗೆ ಆದೇಶಿಸಲಾಗಿದೆ.
ರಹೀಂ ಉಚ್ಚಿಲ್ ಅವರು ಖ್ಯಾತ ವಕೀಲ ಎಸ್ ಎಸ್ ಖಾಝಿ ಅವರ ಮುಖಾಂತರ ಖಾಸಗಿ ದೂರನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಅಂದಿನ ನ್ಯಾಯಾಧೀಶರು, ದೂರುದಾರರು ನೀಡಿದ ಸಿಡಿ, ಮಾಧ್ಯಮ ವರದಿ, ಹಾಗೂ ಇನ್ನಿತರ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿದ್ದರು. ಆದರೆ ಆದೇಶ ನೀಡುವ ಹೊತ್ತಿಗೆ ಅವರ ವರ್ಗಾವಣೆಯಾಗಿತ್ತು.
ಇದೀಗ ಹೊಸ ನ್ಯಾಯಾಧೀಶರು ದೂರನ್ನು ಮತ್ತೊಮ್ಮೆ ಪರಿಶೀಲಿಸಿ ವಕೀಲ ವಾದವನ್ನು ಆಲಿಸಿ, ಚಕ್ರವರ್ತಿ ಸೂಲಿಬೆಲೆ ವಿರುದ್ದ ಅವಾಚ್ಯ ಹಾಗೂ ಮಾನಹಾನಿ ಪದ ಬಳಕೆ ಮಾಡಿದ ಮಾಜಿ ಸಚಿವ ರಮಾನಾಥ ರೈ ವಿರುದ್ದ ಆದೇಶ ಹೊರಡಿಸಿದ್ದಾರೆ.
ಆದೇಶದ ಪ್ರಕಾರ ಮಾಜಿ ಸಚಿವ ರಮಾನಾಥ ರೈ ವಿರುದ್ದ ಕ್ರಿಮಿನಲ್ ಮೊಕದ್ದೆಮೆ ದಾಖಲಿಸಿ ಮಾನನಷ್ಟ ಹಾಗೂ ಅವಹೇಳನಕಾರಿ ಭಾಷೆ ಪ್ರಯೋಗ ಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 500 ಹಾಗೂ 504 ರ ಪ್ರಕಾರ ನ್ಯಾಯಾಲಯ ಸಮನ್ಸ್ ಜಾರಿ ಮಾಡಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶ ಮಾಡಿದ್ದಾರೆ.