ಉಡುಪಿ, ಜೂ 15 (Daijiworld News/MSP): ಜಿಲ್ಲೆಯ ಕರಾವಳಿ ನಿಯಂತ್ರಣ ವಲಯದಲ್ಲಿ 2018-19 ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ 45 ಜನ ಸ್ಥಳೀಯ ಸಾಂಪ್ರದಾಯಿಕ ಮರಳು ಪರವಾನಗೆದಾರರಿಗೆ ಪರವಾನಿಗೆ ನೀಡಿ ಮರಳು ದಿಬ್ಬ ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಸದರಿಯವರಿಗೆ ನಿಗದಿಪಡಿಸಿರುವ ಪ್ರಮಾಣವು ಮುಗಿದಿರುತ್ತದೆ.
ಕರಾವಳಿ ಜಿಲ್ಲೆಗಳಲ್ಲಿ ಜೂನ್ 1 ರಿಂದ ಜುಲೈ 31 ರ ವರೆಗೆ ಮೀನುಗಾರಿಕೆ ನಿಷೇಧವಿರುವುದರಿಂದ ಈ ಅವಧಿಯಲ್ಲಿ ಸಿಆರ್ಝೆಡ್ ಪ್ರದೇಶದಲ್ಲಿ ಮರಳು ದಿಬ್ಬ ತೆರವುಗೊಳಿಸುವುದು ನಿಷೇಧವಿರುತ್ತದೆ. ಆದ್ದರಿಂದ ಸದರಿ ಅವಧಿಯಲ್ಲಿ ಯಾವುದೇ ಮರಳು ದಿಬ್ಬ ತೆರವುಗೊಳಿಸದಂತೆ ಹಾಗೂ ಮರಳು ಸಾಗಾಣಿಕೆ ನಡೆಸದಂತೆ ಮತ್ತು ಮರಳು ತೆಗೆಯಲು ಬಳಸುತ್ತಿದ್ದ ನಾಡ ದೋಣಿಗಳನ್ನು ನದಿ ದಡದಿಂದ ದೂರವಿಡಲು ಸೂಚಿಸಿದೆ.
ಜಿಲ್ಲೆಯಲ್ಲಿ ಮರಳು ದಾಸ್ತಾನು ಮಾಡುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ಮರಳು ದಿಬ್ಬ ತೆರವುಗೊಳಿಸುವುದು/ ಮರಳು ಸಾಗಾಣಿಕೆ ಮಾಡುವುದು/ ಮರಳು ದಾಸ್ತಾನು ಮಾಡುವುದು ಹಾಗೂ ಮರಳು ತೆಗೆಯಲು ಬಳಸುವ ನಾಡ ದೋಣಿಗಳು ನದಿಯಲ್ಲಿ ಕಂಡುಬಂದಲ್ಲಿ ಸದರಿ ನಾಡ ದೋಣಿ/ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿ, ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.