ಶಿರಸಿ,ಮಾ.9(DaijiworldNews/TA): ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ಈಗಾಗಲೇ ಐತಿಹಾಸಿಕ ಮಹಾಕುಂಭ ಮೇಳ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಮಹಾಕುಂಭ ಮೇಳದ ನೆನಪಿಗಾಗಿ ಶಿರಸಿಯ ಗಣೇಶನಗರದ ಮಹಿಳೆಯೊಬ್ಬರು ಏಕಾಂಗಿಯಾಗಿ ಬಾವಿ ತೋಡುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಗಣೇಶನಗರದ ಜಲಸಾಧಕಿ, 56ರ ಹರೆಯದ ಗೌರಿ ನಾಯ್ಕ ಅವರು ಇದೀಗ ನಾಲ್ಕನೇ ಬಾರಿಗೆ ಏಕಾಂಗಿಯಾಗಿ ಬಾವಿ ತೋಡಿರುವುದು ವಿಶೇಷ. ಇನ್ನು ಬಾವಿಯಲ್ಲಿ ಉಕ್ಕಿದ ಗಂಗೆಯಲ್ಲೇ ಸ್ನಾನ ಮಾಡಿ ಪುಣ್ಯ ಸ್ನಾನದ ಸಮಾಧಾನ ತಂದುಕೊಂಡಿದ್ದಾರೆ.

ಈ ಬಾವಿಗೆ ಕಟ್ಟೆ ಕಟ್ಟಿ ‘ಮಹಾಕುಂಭ ಮೇಳದ ಸಂದರ್ಭದಲ್ಲಿ ತೆಗೆದ ಬಾವಿ’ ಎಂದು ಬೋರ್ಡ್ ಹಾಕುವುದಕ್ಕೂ ಮಹಿಳೆ ನಿರ್ಧರಿಸಿದ್ದಾರೆ. ಇನ್ನು ಡಿಸೆಂಬರ್ನಲ್ಲಿ ಈ ಬಾವಿ ತೋಡಲು ಮಹಿಳೆ ಶುರು ಮಾಡಿದ್ದು, ಸುಮಾರು 30 ಅಡಿ ಆಳಕ್ಕೆ ನೀರು ಬಂದಿದ್ದು ಬಾವಿಯ ಕೆಲಸ ಮುಗಿದಿದೆ. ಗೌರಿ ನಾಯ್ಕ ಏಳು ವರ್ಷ ಹಿಂದೆ ಮನೆ ಹಿಂಬದಿಯಲ್ಲಿ 65 ಅಡಿ ಆಳದ ಬಾವಿ ತೋಡಿದ್ದರು.
ನಂತರ ನಾಲ್ಕು ವರ್ಷ ಹಿಂದೆ 45 ಅಡಿ ಅಳದ ಬಾವಿ ತೆಗೆದಿದ್ದರು. ಕಳೆದ ವರ್ಷ ಇಲ್ಲಿಯ ಗಣೇಶನಗರದ ಅಂಗನವಾಡಿ ಕೇಂದ್ರ-6ರ ಆವರಣದಲ್ಲಿ ಮಕ್ಕಳ ಕುಡಿಯುವ ನೀರಿಗಾಗಿ ಬಾವಿ ತೆಗೆದಿದ್ದರು. ಹಲವು ಅಡೆತಡೆಗಳು ಎದುರಾದರೂ ಜಗ್ಗದೇ ಕೆಲಸ ಮುಗಿಸಿದ್ದರು.