ಬಂಟ್ವಾಳ, ಮಾ.9(DaijiworldNews/TA): ಕಳೆದೆರಡು ವಾರದಿಂದ ಸುದ್ದಿ ಮಾಡಿದ್ದ ಫರಂಗಿಪೇಟೆ ದಿಗಂತ್ ನಾಪತ್ತೆ ಪ್ರಕರಣ ಸದ್ಯ ಸುಖಾಂತ್ಯವಾಗಿದೆ. ದಿಗಂತ್ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದು, ಸದ್ಯ ಪ್ರಕರಣದ ಬಗ್ಗೆ ಹತ್ತು ಹಲವು ಗೊಂದಲಗಳು ಎದ್ದಿದ್ದು, ಹೀಗಾಗಿ ದ.ಕ.ಜಿಲ್ಲಾ ಎಸ್ ಪಿ ಯತೀಶ್ ಎನ್ ತನಿಖೆಯ ಬಗ್ಗೆ ವಿವರಣೆ ನೀಡಿದ್ದಾರೆ.

ನಾಪತ್ತೆ ಬಳಿಕ ಬಂಟ್ವಾಳ ಡಿವೈಎಸ್ ಪಿ ನೇತೃತ್ತದಲ್ಲಿ ಏಳು ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು. ಕಾಣೆಯಾಗಿದ್ದ ದಿಗಂತ್ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ. ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ತಿಳಿಸಿದ್ದಾನೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಹಿನ್ನೆಲೆಯಲ್ಲಿ ಹೆದರಿದ್ದಾಗಿ ದಿಗಂತ್ ಹೇಳಿದ್ದಾನೆ. ಮನೆಯಿಂದ ರೈಲ್ವೇ ಟ್ರಾಕ್ ಬಳಿ ಬಂದು ಬೈಕ್ ಹಿಡಿದು ಮಂಗಳೂರಿಗೆ ಬಂದಿದ್ದಾನೆ. ಅಲ್ಲಿಂದ ಬಸ್ಸಿನಲ್ಲಿ ಶಿವಮೊಗ್ಗ ಹೋಗಿ ಅಲ್ಲಿಂದ ಮೈಸೂರಿಗೆ ಹೋಗಿದ್ದಾನೆ.
ಬಳಿಕ ರೈಲಿನಲ್ಲಿ ಬೆಂಗಳೂರಿನ ಕೆಂಗೇರಿ ಹೋಗಿ ರೆಸಾರ್ಟ್ ನಲ್ಲಿ ಕೆಲಸ ಮಾಡಿದ್ದಾನೆ. ಅಲ್ಲಿಂದ ಬೆಂಗಳೂರು ತಿರುಗಿ ಮತ್ತೆ ಮೈಸೂರಿಗೆ ಬಂದು ರೈಲಿನಲ್ಲಿ ಉಡುಪಿಗೆ ಬಂದಿದ್ದಾನೆ. ಉಡುಪಿಯಲ್ಲಿ ಬಟ್ಟೆ ತೆಗೆದುಕೊಳ್ಳಲು ಮಳಿಗೆಯೊಂದಕ್ಕೆ ಹೋಗಿ ಅಲ್ಲಿ ದುಡ್ಡು ಕೊಡದೆ ಎಸ್ಕೇಪ್ ಆಗುವ ವೇಳೆ ಸಿಕ್ಕಿಕೊಂಡಿದ್ದಾನೆ ಎಂದು ಎಸ್ಪಿ ಯತೀಶ್ ಮಾಹಿತಿ ನೀಡಿದ್ದಾರೆ.