ಉಡುಪಿ,ಜೂ14(Daijiworldnews/AZM):ಸಮುದ್ರಕ್ಕಿಳಿಯಬೇಡಿ ಎನ್ನುವ ಎಚ್ಚರಿಕೆ ಇದ್ದರೂ ಕೂಡಾ ಅದನ್ನು ನಿರ್ಲಕ್ಷಿಸಿ ಸಮುದ್ರಕ್ಕಿಳಿದ ಯುವಕನನ್ನು ಮಲ್ಪೆ ಜೀವರಕ್ಷಕ ತಂಡದ ಸಿಬ್ಬಂಧಿ ಮಧು ಎಂಬವರು ರಕ್ಷಿಸಿ ದಡ ಸೇರಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಎರಡು ದಿನಗಳ ಹಿಂದಿನ ಈ ವೀಡಿಯೋ ಇದೀಗ ಲಭ್ಯವಾಗಿದೆ. ಕಳೆದ ಮೂರು ದಿನಗಳಿಂದ ಕಡಲಲ್ಲಿ ಅಬ್ಬರ ಜೋರಾಗಿದೆ. ಭದ್ರಾವತಿ ಮೂಲದ ಯುವಕರ ತಂಡ ಮಲ್ಪೆ ಬೀಚ್ಗೆ ಬಂದಿತ್ತು. ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದ್ದರೂ ಲೆಕ್ಕಿಸದೆ ತಂಡ ನೀರಿಗಿಳಿದಿತ್ತು. ಈ ಸಂದರ್ಭ ಒಬ್ಬ ಯುವಕ ಅಲೆಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿದ್ದಾನೆ. ಕೂಡಲೇ ಮಲ್ಪೆಯ ಜೀವ ರಕ್ಷಕ ತಂಡದ ಮಧು ಸಮುದ್ರಕ್ಕೆ ಜಿಗಿದು ಯುವಕನನ್ನು ರಕ್ಷಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ವಾಯು ಚಂಡಮಾರುತದ ಅಬ್ಬರ ಜಾಸ್ತಿಯಾಗಿದ್ದು, ಕಡಲಬ್ಬರ ವಿಪರೀತವಾಗಿದೆ.
ಇದೇ ವೇಳೆ ಲೈಫ್ ಗಾರ್ಡ್ ಮಧು ಮಾತನಾಡಿ, ಮಳೆಗಾಲದಲ್ಲಿ ಪ್ರವಾಸಿಗರು ಸಮುದ್ರದಿಂದ ದೂರ ಇರುವುದೇ ಒಳ್ಳೆಯದು. ಬೇರೆ ಊರಿನವರಿಗೆ ಸಮುದ್ರದ ಬಗ್ಗೆ ಗೊತ್ತಿಲ್ಲ. ಮಾಮೂಲಿ ನದಿಯ ಈಜಾಟದ ತರ ಇದಲ್ಲ. ಕಾಲಿನಡಿಯ ಮರಳು ಜಾರಿಕೊಂಡು ಸಮುದ್ರದತ್ತ ಎಳೆಯುತ್ತದೆ. ತೂಫಾನ್ ಕಡಿಮೆಯಾಗುವವರೆಗೆ ದಯವಿಟ್ಟು ಯಾರೂ ಸಮುದ್ರಕ್ಕೆ ಇಳಿಯಬೇಡಿ ಎಂದು ಪ್ರವಾಸಿಗರಲ್ಲಿ ಮನವಿ ಮಾಡಿಕೊಂಡರು.