ಮಂಗಳೂರು, ಮಾ.04(DaijiworldNews/TA): ಇಟೆಲಿಯಲ್ಲಿ ಮಾ. 8 ರಿಂದ 15ರ ವರೆಗೆ ನಡೆ ಯಲಿರುವ “ಸ್ಪೆಷಲ್ ಒಲಿಂಪಿಕ್ಸ್ ವರ್ಲ್ಡ್ ವಿಂಟರ್ ಗೇಮ್ಸ್ – 2025’ರಲ್ಲಿ ಭಾರತದ ಫ್ಲೋರ್ಬಾಲ್ ತಂಡದ ತರಬೇತುದಾರರಾಗಿ ಕರ್ನಾಟಕದಿಂದ ಮಂಗಳೂರಿನ ಸೌಮ್ಯಾ ದೇವಾಡಿಗ ಆಯ್ಕೆಯಾಗಿದ್ದಾರೆ.

ಫ್ಲೋರ್ಬಾಲ್ ತಂಡಕ್ಕೆ ಹಿಮಾಚಲ ಪ್ರದೇಶದಿಂದ ಇಬ್ಬರು ಮತ್ತು ಕರ್ನಾಟಕದಿಂದ ಮೂವರು ಆಯ್ಕೆ ಯಾಗಿದ್ದಾರೆ. ಸ್ಪೆಷಲ್ ಒಲಿಂಪಿಕ್ಸ್ ನಲ್ಲಿ 8 ವಿಭಾಗದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಭಾರತೀಯರು ಸ್ನೋ ಬೋರ್ಡಿಂಗ್, ಸ್ನೋ ಶೂ, ಅಲ್ಪೆನ್ ಸ್ಕೇಟಿಂಗ್, ಕ್ರಾಸ್ ಕಂಟ್ರಿ, ಫ್ಲೋರ್ಬಾಲ್ ಮತ್ತು ಫಿಗರ್ ಸ್ಕೇಟಿಂಗ್ನಲ್ಲಿ ಭಾಗವಹಿಸಲಿದ್ದಾರೆ. ತರಬೇತುದಾರರು ಮತ್ತು ಕ್ರೀಡಾ ಪಟುಗಳು ಸಹಿತ 78 ಮಂದಿ ಭಾರತ ತಂಡದಲ್ಲಿರುತ್ತಾರೆ. ಸುರತ್ಕಲ್ ಚಿತ್ರಾಪುರದ ನಿವಾಸಿ ಯಾಗಿರುವ ಸೌಮ್ಯಾ, ಸುರತ್ಕಲ್ನ ಲಯನ್ಸ್ ಸ್ಪೆಷಲ್ ಸ್ಕೂಲ್ನಲ್ಲಿ ಶಿಕ್ಷಕಿಯಾಗಿದ್ದಾರೆ.
ಸೌಮ್ಯಾ ಮಾತನಾಡಿ, ಫ್ಲೋರ್ ಹಾಕಿಯಲ್ಲಿ 2018ರಲ್ಲಿ ಕೇರಳಕ್ಕೆ ತರಬೇತುದಾರೆಯಾಗಿ ಹೋಗಿದ್ದೆ. ಅಲ್ಲಿ ತಂಡ ಬೆಳ್ಳಿ ಪದಕ ಪಡೆದಿತ್ತು. 2022ರಲ್ಲಿ ಯುನಿಫೈಡ್ ಫುಟ್ಬಾಲ್ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕೋಚ್ ಆಗಿದ್ದೆ. ಇಲ್ಲಿ ತರಬೇತು ಪಡೆದು ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಲಯನ್ಸ್ ಸ್ಪೆಷಲ್ ಸ್ಕೂಲ್ನ ಲಿಖೀತಾ ಕಂಚಿನ ಪದಕ ಪಡೆದಿದ್ದರು. ಪಾಸ್ಪೋರ್ಟ್ಗೆ ಸಂಬಂಧಿಸಿದ ದಾಖಲಾತಿಗಳ ವಿಳಂಬದಿಂದಾಗಿ ನನಗೆ ಅಮೆರಿಕಕ್ಕೆ ತೆರಳಲು ಸಾಧ್ಯವಾಗಿರಲಿಲ್ಲ. ಫ್ಲೋರ್ಬಾಲ್ನಲ್ಲಿ ವಿಶೇಷ ಆಸಕ್ತಿ ವಹಿಸಿ ಅದರಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಾ ಬಂದಿದ್ದೇನೆ. ಅಂತಾರಾಷ್ಟ್ರೀಯವಾಗಿ ಮಹಿಳಾ ವಿಭಾಗದಲ್ಲಿ ಕೋಚ್ ಆಗಿ ಮಂಗಳೂರಿನಿಂದ ನಾನು ಮೊದಲ ಬಾರಿಗೆ ಆಯ್ಕೆಯಾಗಿದ್ದೇನೆ ಎಂದರು.