ಮಂಗಳೂರು, ಜೂ14(Daijiworld News/SS): ಮಾಹಿತಿ ಇಲ್ಲದೆ ಆರೋಪಗಳನ್ನು ಮಾಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ಯಾವುದೇ ರೀತಿಯ ಮಾಹಿತಿ ಇಲ್ಲದೆ ರಾಜ್ಯ ಸರ್ಕಾರದ ವಿರುದ್ಧ ವೃಥಾ ಆರೋಪ ಮಾಡುತ್ತಿರುವ ಬಿಜೆಪಿ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸಲು ವಿಫಲವಾಗಿದೆ ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ ಹಾಗೂ ವಿಧಾನ ಪರಿಷತ್ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರು ರಾಜ್ಯ ಸರಕಾರದ ವಿರುದ್ಧ ಮಾಹಿತಿ ಇಲ್ಲದೆ ಆರೋಪ ಮಾಡುತ್ತಿದ್ದಾರೆ. ಜನರನ್ನು ದಾರಿ ತಪ್ಪಿಸುವ ಬದಲು ಅಭಿವೃದ್ಧಿ ಬಗ್ಗೆ ನನ್ನ ಜತೆ ಚರ್ಚೆಗೆ ಬರಲಿ. ರಾಜ್ಯ ಸರಕಾರದ ಸಾಧನೆಗಳನ್ನು ನಾನು ದಾಖಲೆ ಸಹಿತ ಅವರಿಗೆ ತಿಳಿಸುವೆ ಎಂದು ಹೇಳಿದರು.
ಬಿಪಿಎಲ್ ಪಡಿತರ ಚೀಟಿ ದೊರಕಿಲ್ಲ ಎಂಬುದಾಗಿ ರಾಜ್ಯ ಸರಕಾರದ ವಿರುದ್ಧ ಶೋಭಾ ಕರಂದ್ಲಾಜೆ ವ್ಯಕ್ತಪಡಿಸುತ್ತಿರುವ ಆಕ್ರೋಶ ವಾಸ್ತವದಲ್ಲಿ ಕೇಂದ್ರ ಸರಕಾರದ ವಿರುದ್ಧವಾಗಿದೆ ಎಂದು ದೂರಿದರು.
ಕೇಂದ್ರದಲ್ಲಿ ಮಂತ್ರಿ ಸ್ಥಾನ ದೊರೆಯದೆ ಹತಾಶರಾಗಿರುವ ಅವರು ಈ ರೀತಿ ರಾಜ್ಯ ಸರಕಾರದ ವಿರುದ್ಧ ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.