ವರದಿ: ಮೌನೇಶ ವಿಶ್ವಕರ್ಮ
ಬಂಟ್ವಾಳ, ಜೂ 14 (Daijiworld News/MSP): ಬುಧವಾರ ಬೆಳಗ್ಗೆ 10 ಗಂಟೆಯ ಸಮಯ. ಬಂಗ್ಲೆಗುಡ್ಡೇಯ ವಸತಿ ಶಾಲೆಯಲ್ಲಿದ್ದ ಮಕ್ಕಳೆಲ್ಲರೂ ಶಾಲೆಗೆ ತೆರಳಿದ್ದರು, ಅಡುಗೆ ಸಿಬ್ಬಂದಿಗಳು ಅಡುಗೆ ಕೋಣೆಯಲ್ಲಿದ್ದರು.. ಇತ್ತ ಧೋ ಎಂದ ಸುರಿದ ಮಳೆಗೆ ಹಾಲ್ ನಲ್ಲಿ ನೇತು ಹಾಕಿದ್ದ ಫ್ಯಾನ್ ಹಾಗೂ ಅಲ್ಲಿದ್ದ ಟ್ಯೂಬ್ ಸಹಿತ ನೆಲಕ್ಕೆ ಬಿದ್ದಿತ್ತು.. ಹೌದು ಈ ಘಟನೆ ನಡೆದದ್ದು ಜೂ ೧೨ ರ ಬುಧವಾರ ಬೆಳಗ್ಗೆ ಪಾಣೆಮಂಗಳೂರಿನ ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ.
ಒಂದು ವೇಳೆ ರಾತ್ರಿ ಹೊತ್ತಿನಲ್ಲಿ ಈ ಘಟನೆ ನಡೆದಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಈ ಘಟನೆಯ ಬಳಿಕ ಎಚ್ಚೆತ್ತ ಇಲಾಖಾ ಅಧಿಕಾರಿಗಳು, ಗುರುವಾರ ಈ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ 15 ಮಕ್ಕಳನ್ನು ಮೊಗರ್ನಾಡುವಿನ ಹೊಸ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ.
1977ರಿಂದ ಪಾಣೆಮಂಗಳೂರಿನ ಬಂಗ್ಲೆಗುಡ್ಡೆಯ ಪುರಸಭೆಯ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ವಸತಿ ನಿಲಯ ಕಳೆದ ಕೆಲವು ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಬಗ್ಗೆ ಮಾಧ್ಯಮಗಳಲ್ಲಿಯೂ ವರದಿಗಳಾಗಿತ್ತು. ಆದರೆ ಈ ಕಟ್ಟಡ 1889ರಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡ ಬಂಟ್ವಾಳ ಪುರಸಭೆಯ ಅಧೀನದಲ್ಲಿತ್ತು. 1977ರಲ್ಲಿ ನಿಗದಿಯಾಗಿದ್ದ ಮಾಸಿಕ ಬಾಡಿಗೆ 300 ರೂ. ಅದನ್ನೇ ಇಲಾಖೆ ಕಳೆದ ತಿಂಗಳವರೆಗೂ ಪುರಸಭೆಗೆ ಪಾವತಿಸುತ್ತಿತ್ತು. ಕಡಿಮೆ ಬಾಡಿಗೆಯ ಕಾರಣಕ್ಕೆ ಪುರಸಭೆಯೂ ಈ ಕಟ್ಟಡ ದುರಸ್ಥಿ ಕಡೆಗೆ ನಿಗಾವಹಿಸಿರಲಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಗುರುವಾರ ಬೆಳಿಗ್ಗೆ ಹಾಸ್ಟೆಲ್ನಲ್ಲಿದ್ದ ಕಪಾಟುಗಳನ್ನು ಅಡಿಗೆ ಸಾಮಾಗ್ರಿಗಳನ್ನು ಕೂಡ ಸ್ಥಳಾಂತರಿಸಲಾಗಿದ್ದು, ಮಕ್ಕಳಿಗೆ ತಕ್ಕ ಮಟ್ಟಿಗೆ ಭದ್ರತೆ ದೊರೆತಂತಾಗಿದೆ. ಈ ಹಾಸ್ಟೆಲ್ನಲ್ಲಿ 35 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ಕಳೆದ ವರ್ಷದ ಪುನರಾವರ್ತಿತ 15 ವಿದ್ಯಾರ್ಥಿಗಳು ಸದ್ಯಕ್ಕೆ ಈ ಹಾಸ್ಟೆಲ್ನಲ್ಲಿದ್ದು, ಉಳಿದ 20 ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ಇನ್ನಷ್ಟೇ ನಡೆಯಬೇಕಿದೆ ಎಂದು ಇಲಾಖಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
" ವಸತಿ ಶಾಲೆ ತೀರಾ ದುರಸ್ತಿಯಲ್ಲಿದ್ದ ಹಿನ್ನೆಲೆಯಲ್ಲಿ ಬದಲಿ ಬಾಡಿಗೆ ಕಟ್ಟಡವನ್ನು ನೋಡಿದ್ದೆವು, ಕೆಲ ತಾಂತ್ರಿಕ ಕೆಲಸಗಳಿಂದ ನಿಧಾನವಾಗಿತ್ತು. ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ವಸತಿ ನಿಲಯದ ಮೇಲ್ವಿಚಾರಕರಿಗೆ ಮಕ್ಕಳನ್ನು ಸ್ಥಳಾಂತರಿಸುವಂತೆ ನಿರ್ದೇಶನ ನೀಡಲಾಗಿದೆ" ಎನ್ನುತ್ತಾರೆ ಬಂಟ್ವಾಳದ ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಣ್ಣ
" ಹಾಸ್ಟೆಲ್ ಮೇಲ್ಛಾವಣಿ ಕುಸಿಯುವವರೆಗೂ ಮಕ್ಕಳನ್ನು ಇಲ್ಲಿಯೇ ವಾಸ್ತವ್ಯ ಹೂಡಿಸಿದ್ದು ಆತಂಕಕಾರಿ ವಿಷಯವಾಗಿದೆ. ಘಟನೆಯ ಬಳಿಕ ಮಕ್ಕಳಿಗೆ ಇಲಾಖೆಯು ಈಗಾಗಲೇ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದೆ. ಹಳೆ ಹಾಸ್ಟೆಲ್ ಪಕ್ಕದಲ್ಲಿ ಇಲ್ಲಿನ ಬಾಲಕರಿಗಾಗಿ ನಿರ್ಮಿಸಿದ ಹೊಸ ಕಟ್ಟಡದಲ್ಲಿ ಮೆಟ್ರಿಕ್ ಪೂರ್ವ ಬಾಲಕಿಯರಿಗೆ ವಸತಿ ವ್ಯವಸ್ಥೆ ಮಾಡಿದ್ದು, ಬಾಲಕರು ಮತ್ತೆ ವಾಸ್ತವ್ಯ ವಂಚಿತರಾಗಿದ್ದಾರೆ. ಇದರಿಂದ ಇಲ್ಲಿರುವ ಬಾಲಕಿಯರಿಗೆ ವಸತಿ ನಿಲಯಕ್ಕೆ ಹೊಸ ಕಟ್ಟಡವನ್ನು ಶೀಘ್ರ ಮಂಜೂರುಗೊಳಿಸಿ, ಈಗಾಗಲೇ ನಿಗದಿಯಾಗಿರುವ ಹೊಸ ಹಾಸ್ಟೆಲ್ನಲ್ಲಿ ಬಾಲಕರ ವಸತಿಗೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮನವಿ ಮಾಡಲಾಗುವುದು " .-ಅಬ್ದುಲ್ಲಾ ಮಾಝಿನ್, ಸಿಎಫ್ಐ ಬಂಟ್ವಾಳ ತಾಲೂಕು ಅಧ್ಯಕ್ಷ