ಮಂಗಳೂರು, ಜೂ14(Daijiworld News/SS): ದಕ್ಷಿಣ ಕನ್ನಡ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನಲೆ, ಚಾರ್ಮಾಡಿ ಘಾಟ್ ಮತ್ತೆ ಕುಸಿಯುವ ಭೀತಿಯನ್ನು ಎದುರಿಸುತ್ತಿದೆ.
ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಎರಡು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆಗಾಲದ ಪ್ರಾರಂಭದಲ್ಲೇ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ ಎನ್ನಲಾಗಿದೆ.
ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಈಗಾಗಲೇ ಅಲ್ಲಲ್ಲಿ ಗುಡ್ಡ, ಮರಗಳು ಕುಸಿದಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಘಾಟ್ನಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಕೊಡಗಿನಲ್ಲಿ ಮತ್ತೆ ಮುಂಗಾರು ಮಳೆ ಚುರುಕಾಗಿದೆ. ಮೂರು ದಿನಗಳ ನಂತರ ಬೆಳಗ್ಗೆ ಬಿಡುವು ನೀಡಿದ್ದ ಮಳೆ, ಇಂದು ಮತ್ತೆ ಸುರಿಯುತ್ತಿದೆ. ಭಾರೀ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ.
ಕೊಡಗು, ಉಡುಪಿ, ಮಂಗಳೂರು ಭಾಗದಲ್ಲಿ ಎರಡು ದಿನಗಳಿಂದ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುವ ಬೀತಿ ಎದುರಾಗಿದೆ. ಮಳೆಗೆ ಮರಗಳ ಜೊತೆಗೆ ಗುಡ್ಡದ ಮಣ್ಣು ಸಹ ರಸ್ತೆಗೆ ಬೀಳಲಾರಂಭಿಸಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಚಾರ್ಮಾಡಿ ಘಾಟ್. ಆದರೆ ಮಳೆಗಾಲದ ಸಮಯದಲ್ಲಿ ಈ ರಸ್ತೆಯಲ್ಲಿ ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ವಾಹನ ಓಡಿಸಬೇಕು. ಇದೀಗ ಈ ಭಾರಿ ಸುರಿದ ಮೊದಲ ಮಳೆಗೆ ಚಾರ್ಮಾಡಿ ಘಾಟ್ ಕುಸಿಯುತ್ತಿರುವುದು ವಾಹನ ಸವಾರರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ.