ಮಂಗಳೂರು, ಜೂ14(Daijiworld News/SS): ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಸಮುದ್ರದ ರೌದ್ರ ನರ್ತನ ಆರಂಭವಾಗಿದೆ. ಕರಾವಳಿಯುದ್ದಕ್ಕೂ ತೀರ ಪ್ರದೇಶದಲ್ಲಿ ಸಮುದ್ರದ ಆಳೆತ್ತರದ ಅಲೆಗಳು ತೀರಕ್ಕೆ ನುಗ್ಗುತ್ತಿವೆ. ಪರಿಣಾಮ ಕರಾವಳಿಯಲ್ಲಿ ಕಡಲಕೊರೆತ ತೀವ್ರಗೊಂಡಿದೆ.
ನಗರದ ಹೊರವಲಯದ ಸೋಮೇಶ್ವರ, ಉಚ್ಚಿಲ ಮತ್ತು ಉಳ್ಳಾಲದಲ್ಲಿ ಸಮುದ್ರ ಕೊರೆತ ಮುಂದುವರಿದಿದ್ದು, ಕಿಲೇರಿಯಾನಗರದಲ್ಲಿ ಐದು ಮನೆಗಳು ಸಮುದ್ರ ಪಾಲಾಗಿದೆ. ಮಾತ್ರವಲ್ಲ, ಸಮುದ್ರ ತೀರದಲ್ಲಿರುವ 49 ಮನೆಗಳು ಅಪಾಯದಂಚಿನಲ್ಲಿದೆ. ಹೀಗಾಗಿ ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.
ಉಳ್ಳಾಲ ಕಿಲೇರಿಯಾನಗರದಲ್ಲಿ ಹಮೀದ್, ಬದ್ರುನ್ನೀಸಾ, ಖತಿಜಮ್ಮ, ಸೆಬಿನಾ ಮತ್ತು ಜೈನಾಬ್ ಅವರ ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಕೈಕೋ, ಕಿಲೇರಿಯಾನಗರ, ಮೊಗವೀರಪಟ್ಣ, ಆರ್ಸಿಇಗ್ರೌಂಡ್ ಸೇರಿದಂತೆ ಉಳ್ಳಾಲ ವ್ಯಾಪ್ತಿಯಲ್ಲಿ ಮನೆಗಳ ಜೊತೆಗೆ ಎರಡು ಮಸೀದಿಗಳು ಕೂಡ ಅಪಾಯದಂಚಿನಲ್ಲಿವೆ ಎಂದು ತಿಳಿದುಬಂದಿದೆ.
ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ, ಫೆರಿಬೈಲು ರುದ್ರಪಾದೆ ಪ್ರದೇಶದಲ್ಲಿ ಸಮುದ್ರದ ಕೊರೆತ ಹೆಚ್ಚಿದ್ದು, ಏಳು ಮನೆಗಳು ಅಪಾಯದಂಚಿನಲ್ಲಿವೆ. ಉಚ್ಚಿಲ ಮತ್ತು ಸೋಮೇಶ್ವರದ ಉದ್ದಕ್ಕೂ ತೆಂಗಿನಮರ, ಗಾಳಿಮರ ಸೇರಿದಂತೆ ಸಮುದ್ರ ತಟದಲ್ಲಿದ್ದ ಮರಗಳು ಸಂಪೂರ್ಣ ಸಮುದ್ರಪಾಲಾಗಿದ್ದು, ಮರಗಳು ಸಮುದ್ರದ ಅಲೆಗಳಿಗೆ ಕಡಲ ಒಡಲು ಸೇರಿದೆ.