ಕುಂದಾಪುರ, ಫೆ.26 (DaijiworldNews/AA): ಸಮುದ್ರದಲ್ಲಿ ಮಾರಣಬಲೆ ಬಿಡುವ ವೇಳೆ ಯುವಕನೋರ್ವ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಕೋಟೇಶ್ವರ ಹಳೆಅಳಿವೆ ಬಳಿ ಫೆ.25ರಂದು ನಡೆದಿದೆ.

ಬೀಜಾಡಿ ನಿವಾಸಿ ಮೇಘರಾಜ್ (24) ಮೃತ ಯುವಕ ಎಂದು ಗುರುತಿಸಲಾಗಿದೆ.
ಮೇಘರಾಜ್ ಅವರು ಬೀಜಾಡಿ ಬಳಿ ಸಮುದ್ರದಲ್ಲಿ ಮಾರಣಬಲೆ ಬಿಡಲೆಂದು ಹೋಗಿದ್ದರು. ಈ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ನೀರುಪಾಲಾಗಿದ್ದರು. ಸಂಜೆ ವೇಳೆ ಮೇಘರಾಜ್ ಮೃತದೇಹವು ಬೀಜಾಡಿ ಸಮೀಪ ಕಡಲ ತೀರದಲ್ಲಿ ಪತ್ತೆಯಾಗಿದೆ.
ತಕ್ಷಣ ಸ್ಥಳಕ್ಕಾಗಮಿಸಿದ ಗಂಗೊಳ್ಳಿ ಕರಾವಳಿ ಕಾವಲು ಪಡೆ ಸಿಬ್ಬಂದಿಗಳು ಹಾಗೂ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿಗಳಾದ ಸುದರ್ಶನ್ ಎಸ್. ಕುಂದರ್, ಕೃಷ್ಣ ಕಾಂಚನ್, ಸಂತೋಷ್ ಪೂಜಾರಿ, ಸುಧಾಕರ್ ಖಾರ್ವಿ ಇವರು ಮೃತದೇಹವನ್ನು ಪರಿಶೀಲಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.