ಬಂಟ್ವಾಳ, ಫೆ.26 (DaijiworldNews/AA): ನಿಯಂತ್ರಣ ತಪ್ಪಿದ ಕಾರೊಂದು ಅಂಗಡಿಯೊಳಗೆ ನುಗ್ಗಿ ಅಂಗಡಿಯ ಹೊರಗೆ ಕುಳಿತಿದ್ದ ವೃದ್ಧೆ ಹಾಗೂ ಗ್ರಾಹಕರೋರ್ವರಿಗೆ ಡಿಕ್ಕಿಯಾದ ಪರಿಣಾಮ ವೃದ್ಧೆ ಸಾವನ್ನಪ್ಪಿದ ಘಟನೆ ಫೆ. 23ರಂದು ರಾತ್ರಿ ನಡೆದಿದೆ.

ಮೃತಪಟ್ಟವರನ್ನು ವಾಮದಪದವು ನಿವಾಸಿ ಸುಮತಿ (91) ಎಂದು ಗುರುತಿಸಲಾಗಿದೆ. ಅವರು ತಮ್ಮ ಪುತ್ರ ಮಂಜುನಾಥ್ ಅವರ ದಿನಸಿ ಅಂಗಡಿ ಹೊರಗೆ ಕುರ್ಚಿಯಲ್ಲಿ ಕುಳಿತಿದ್ದಾಗ ಈ ಅಪಘಾತ ಸಂಭವಿಸಿದೆ.
ಸಂಜೆ ಸುಮಾರು 6.45ರ ಹೊತ್ತಿಗೆ ಸ್ಥಳೀಯ ನಿವಾಸಿ ಶೋಭಾ ಅವರು ಚಲಾಯಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ನೇರವಾಗಿ ಅಂಗಡಿಗೆ ನುಗ್ಗಿದೆ. ಅಂಗಡಿಯ ಮುಂಭಾಗದಲ್ಲಿ ಹಾಕಿದ್ದ ಕಬ್ಬಿಣದ ಕಂಬವನ್ನು ಮುರಿದು ಸುಮತಿ ಅವರಿಗೆ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಸುಮತಿ ಅವರನ್ನು ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು.
ಆದರೆ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ ಲೂಯಿಸ್ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಅಂಗಡಿ ಮುಂದೆ ನಿಲ್ಲಿಸಲಾದ ದ್ವಿಚಕ್ರ ವಾಹನವೂ ಜಖಂ ಗೊಂಡಿದೆ. ಅಪಘಾತದ ಸಂಪೂರ್ಣ ದೃಶ್ಯ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಂಜುನಾಥ್ ಅವರ ಅಳಿಯ ಗಣೇಶ್ ಮಲ್ಯ ಅವರ ದೂರಿನ ಮೇರೆಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.