Karavali
ಬಂಟ್ವಾಳ: 'ಭಾರತ ನನ್ನ ದೇಶ ಎಂಬ ಹೆಮ್ಮೆ ಎಲ್ಲರಲ್ಲಿಯೂ ಮೂಡಬೇಕು'- ಅಣ್ಣಾಮಲೈ
- Tue, Feb 25 2025 09:46:19 PM
-
ಬಂಟ್ವಾಳ, ಫೆ.25 (DaijiworldNews/AA): ಭಾರತ ನನ್ನ ದೇಶ ಎಂಬ ಭಾವನೆ, ಹೆಮ್ಮೆ ಎಲ್ಲರಲ್ಲಿಯೂ ಮೂಡಬೇಕು, ಯುವಜನತೆಯು ಶಿವಾಜಿ ಮಹಾರಾಜರಂತಹ ಶ್ರೇಷ್ಠ ವ್ಯಕ್ತಿಗಳ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶಸೇವೆ ಮಾಡಬೇಕು ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ನಿವೃತ್ತ ಪೊಲೀಸ್ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೆ ಅವರು ಹೇಳಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇವರ ವತಿಯಿಂದ ಶ್ರೀರಾಮ ಪದವಿ ಕಾಲೇಜಿನ ಆಜಾದ್ ಭವನದಲ್ಲಿ ಮಂಗಳವಾರ ನಡೆದ "ಪ್ರಚಲಿತ ಭಾರತ: ಸತ್ಯ-ಮಿಥ್ಯೆ" ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಗವದ್ಗೀತೆ, ಪುರಾಣ ಗ್ರಂಥಗಳಿಗೆ ಆರತಿ ಎತ್ತಿ ಅರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ "ನನ್ನ ದೇಶ- ನನ್ನ ಹೊಣೆ" ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಭಾರತದ ಸಾಂಸ್ಕೃತಿಕ ವೈಭವ, ಜೀವನ ಶೈಲಿಯನ್ನು ಅರಿತುಕೊಂಡು ಅದನ್ನು ಉಳಿಸುವ ಕಾರ್ಯಾಗಬೇಕು ಎಂದ ಅವರು, ಭಾಷೆ, ಸಂಸ್ಕೃತಿ, ಜಾತಿ-ಮತ ಭೇದವಿದ್ದರೂ ಸಾಮರಸ್ಯದ ಜೀವನ ಅನಿವಾರ್ಯ, ವಿವಿಧತೆಯಲ್ಲಿ ಏಕತೆ ನಮ್ಮ ಮಂತ್ರವಾಗಬೇಕು, ದೇಶದ ಹಿತಚಿಂತನೆಯನ್ನು ನಡೆಸುವುದು ಭಾರತೀಯರ ಆದ್ಯ ಕರ್ತವ್ಯವಾಗಬೇಕು ಎಂದರು.
ಗ್ರಾಮೀಣ ಪ್ರದೇಶದ ಆರ್ಥಿಕತೆಯಲ್ಲಿ ಸುಧಾರಣೆ ಕಾಣಬೇಕು, ಹಳ್ಳಿಗಳಲ್ಲಿ ಕಲಿತ ಯುವಕ, ಯುವತಿಯರು ವಿದೇಶಕ್ಕೆ ಹೋದರೆ ದೇಶವನ್ನು ಬೆಳೆಸುವವರು ಯಾರು ಎಂದು ಪ್ರಶ್ನಿಸಿದ ಅಣ್ಣಾಮಲೈ ಧಾರ್ಮಿಕತೆಯು ದೇಶದ ಆರ್ಥಿಕತೆಯ ಮೇಲೆ ಮಹತ್ತರವಾದ ಕೊಡುಗೆಯನ್ನು ನೀಡಿದೆ. ಪ್ರಯೋಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳ, ತಿರುಪತಿ ಕ್ಷೇತ್ರಗಳಲ್ಲಾಗುತ್ತಿರುವ ಆರ್ಥಿಕ ವಯಿವಾಟು ಇದಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಪ್ರಯಾಗ್ ರಾಜ್ ನಲ್ಲಿ 45 ದಿನಗಳ ಕಾಲ ನಡೆಯುತ್ತಿರುವ ಕುಂಭವೇಳ ವಿಶ್ವದ ಅತ್ಯಂತ ದೊಡ್ಡ ಮತ್ತು ಯಶಸ್ವಿ ಕಾರ್ಯಕ್ರಮವಾಗಿದೆ ಅಲ್ಲದೆ ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಾಗಿದೆ. ಇಂತಹ ಪುಣ್ಯದ ಕಾರ್ಯಕ್ರಮದ ಬಗ್ಗೆ ರಾಜಕೀಯ ಕಾರಣಕ್ಕಾಗಿ ಕೆಲವರು ಮಾಡಲಾಗುವ ಆರೋಪಗಳಿಗೆ ಹೆಚ್ಚಿನ ಮಹತ್ನ ನೀಡಬೇಕಾದ ಅವಶ್ಯಕತೆ ಇಲ್ಲ. ಅಖಂಡ ಭಾರತ ಯಾರ ಅಜೆಂಡಾವು ಅಲ್ಲ, ದೇಶದ ಎಲ್ಲೆಡೆಯಲ್ಲು ಭಾರತೀಯ ಸಂಸ್ಕೃತಿ, ಜೀವನಶೈಲಿ ಅನಾವರಣವಾಗುತ್ತದೆಯಾ ಅವಾಗ ಅಖಂಡ ಭಾರತವಾಗಲು ಸಾಧ್ಯವಾಗುತ್ತದೆ ಎಂದು ನುಡಿದರು.
ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಅಳವಡಿಸಿರುವ ಗುರುಕುಲ ಪದ್ದತಿಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಅಣ್ಣಾಮಲೈ ಅವರು ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮಾಡಿರುವ ಪ್ರಯತ್ನದಲ್ಲಿ ಸಫಲರಾಗಿದ್ದು, ರಾಷ್ಟ್ರೀಯ ವಿಚಾರಧಾರೆಗಳ ಶಿಕ್ಷಣ ಪಡೆದ ವಿದ್ಯಾರ್ಥಿ ಸಮುದಾಯವನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಶಿಕ್ಷಕರನ್ನು ಭಾರತೀಯ ಶಿಕ್ಷಣ ವ್ಯವಸ್ಥೆಯಡಿಯಲ್ಲಿ ತರಬೇಕಾದ ಅನಿವಾರ್ಯತೆ ಇದ್ದು, ಶ್ರೀ ರಾಮ ವಿದ್ಯಾಕೇಂದ್ರದಿಂದ ಮಾತ್ರ ಇದು ಸಾಧ್ಯ, ಈ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡುವ ಕಾರ್ಯಕ್ಕೆ ಮುಂದಾಗುವಂತೆ ಸಲಹೆ ನೀಡಿದರು. ಮಾಡಿದರು.
ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಗಳು ನೀಡುವಂತ ಮಾಹಿತಿಯನ್ನು ಸದುಪಯೋಗಪಡಿಸಿಕೊಂಡು ಪ್ರತಿಕ್ರಿಯೆ ಮಾಡುವ ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದ ಅವರು ಇಂದಿನ ಕಾರ್ಯಕ್ಕೆ ಈಗಲೇ ಫಲ ಸಿಗಬಹುದು ಎಂಬ ಆಸೆ ಬೇಡ, ಮುಂದಿನ ಜನಾಂಗಕ್ಕೆ ಇಲ್ಲಿನ ರಾಷ್ಟ್ರೀಯ ವಿಚಾರಧಾರೆಗಳು ಜೀವಂತ ಉಳಿಯಬೇಕಾಗಿದೆ ಅ ನಿಟ್ಟಿನಲ್ಲಿ ನಮ್ಮ ಪೂರ್ವಜರು ನಾಗರೀಕತೆಗಾಗಿ ಮಾಡಿದ ಹೋರಾಟಗಳು ನಮಗೆ ದಾರಿದೀಪವಾಗಿದೆ. ಅವರ ಮೌಲ್ಯಯುತವಾದ ಜೀವನ ಚರಿತ್ರೆ ನಮಗೆ ಮಾರ್ಗದರ್ಶನ ನೀಡಿದೆ ಎಂದು ತಿಳಿಸಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಠ್ಯ ಪುಸ್ತಕಗಳಲ್ಲಿ ಹಾಗೂ ಕೆಲವೊಂದು ಪ್ರಚಲಿತ ಮಾಧ್ಯಮಗಳಲ್ಲಿ ರಾಷ್ಟ್ರೀಯ ವಿಚಾರಗಳನ್ನು ಮರೆಮಾಚುವ ಕೆಲಸಗಳು ಆಗಿವೆ ಎಂದು ಖೇದ ವ್ಯಕ್ತಪಡಿಸಿದರು. ಇಂತಹ ಸಂದರ್ಭಗಳಲ್ಲಿ ಯಾವುದು ಸತ್ಯ, ಯಾವುದು ಮಿಥ್ಯೆ ಎಂಬುದರ ಬಗ್ಗೆ ಪರಿಪೂರ್ಣವಾಗಿ ತಿಳಿಸುವ ಪ್ರಯತ್ನಗಳನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಮೋದಿ- ಯೋಗಿ ಜೋಡಿಯಿಂದ ಪ್ರಯಾಗ್ ರಾಜ್ ನಲ್ಲಿ ಜಗತ್ತನ್ನೇ ಮೋಡಿ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇಡೀ ಸಮಾಜ, ದೇಶವನ್ನು ಒಟ್ಟುಗೂಡಿಸುವ ಕಾರ್ಯ ಹಿಂದೂಗಳಿಂದ ಆಗುತ್ತಿದ್ದು, ಹಿಂದೂ ದೇಶದ ಆತ್ಮ ವಾಗಿದ್ದು, ಸುಳ್ಳು ಎಂಬ ಪದದಿಂದ ಹೊರಗೆ ಬಂದು ಸತ್ಯವನ್ನು ತಿಳಿಸುವ ಕಾರ್ಯ ಯುವಜನತೆಯಿಂದ ಆಗಬೇಕಾಗಿದೆ ಎಂದು ತಿಳಿಸಿದರು.
ವಿದ್ಯಾಕೇಂದ್ರದ ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಸೋಮಯಾಜಿ ಸಭಾಧ್ಯಕ್ಷತೆ ವಹಿಸಿದ್ದರು.ಸಂಚಾಲಕ ವಸಂತ ಮಾಧವ ವೇದಿಕೆಯಲ್ಲಿದ್ದರು.
ಎರಡನೇ ಅವಧಿಯಲ್ಲಿ ಬೆಂಗಳೂರಿನ ಇತಿಹಾಸ ಸಂಶೋಧಕರಾದ ಡಾ.ವಿಕ್ರಮ್ ಸಂಪತ್ ಅವರು "ಕಲಿತ ಪಾಠಗಳು ಅರಿಯದ ನೋಟಗಳು" ಬಗ್ಗೆ ವಿಚಾರ ಮಂಡಿಸಿದರು. ಮೂರನೇ ಅವಧಿಯಲ್ಲಿ
ಬೆಂಗಳೂರಿನ ನ್ಯಾಯವಾದಿ ಕ್ಷಮಾ ನರಗುಂದ ಅವರು ನರೇಟಿವ್ (ಕಥನ/ಅಖ್ಯಾನ)ವಿಚಾರ ಮಂಡಿಸಿದರು. ಸಮಾರೋಪದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಇಸ್ರೇಲ್ ನಾವರಿಯದ ಸತ್ಯಗಳು ವಿಷಯ ಮಂಡಿಸಿದರು.ಶಿಶುಮಂದಿರಕ್ಕೆ ಭೇಟಿ
ಇದಕ್ಕು ಮೊದಲು ನಿವೃತ್ತ ಐಪಿಎಸ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ.ವಿಕ್ರಮ್ ಸಂಪತ್, ಕ್ಷಮಾ ನರಗುಂದ, ಶ್ರೀಕಾಂತ್ ಶೆಟ್ಟಿ ಮತ್ತಿತರರು ಶಿಶುಮಂದಿರ, ಪ್ರಾಥಮಿಕ ಶಾಲಾ ತರಗತಿಗಳಿಗೆ ಭೇಟಿ ನೀಡಿದರು. ಡಾ.ಪ್ರಭಾಕರ ಭಟ್ ಮತ್ತಿತರರು ಇಲ್ಲಿನ ಚಟುವಟಿಕೆಯ ಬಗ್ಗೆ ಪೂರಕ ಮಾಹಿತಿ ನೀಡಿದರು.ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಅವರು ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಸಂಧ್ಯಾಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿನಿ ಕು. ಪುನೀತಾ ಕಾರ್ಯಕ್ರಮ ನಿರ್ವಹಿಸಿದರು, ಕು. ಸ್ವಾತಿಲಕ್ಷ್ಮೀ ವಂದಿಸಿದರು.