ಬಂಟ್ವಾಳ, ಜೂ 13 (Daijiworld News/SM): ವರ್ಷದ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಬಿಸಿರೋಡಿನಿಂದ ಕುಪ್ಪೆಪದವು ಕಟೀಲು ಬಜಪೆ ಸಂಪರ್ಕದ ಮುಲ್ಲರಪಟ್ನ ಸೇತುವೆ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಬೇಸಿಗೆಯಲ್ಲಿ ಸ್ಥಳೀಯರು ನಿರ್ಮಿಸಿದ್ದ ತಾತ್ಕಾಲಿಕ ರಸ್ತೆಯಲ್ಲಿ ವಾಹನಗಳ ಸಂಚಾರ ಜೂನ್ 14ರಿಂದ ಬಂದ್ ಆಗಲಿದೆ.
ಕರಾವಳಿಯಲ್ಲಿ ತಡವಾಗಿ ಮಳೆ ಸುರಿದರೂ ಇದೀಗ ನದಿಯಲ್ಲಿ ನೀರಿನ ಹರಿವು ಆರಂಭಗೊಂಡಿದೆ. ಇದರಿಂದ ತಾತ್ಕಾಲಿಕವಾಗಿ ಮಣ್ಣು ಹಾಸಿ ನಿರ್ಮಿಸಲಾದ ರಸ್ತೆಯಲ್ಲಿ ಸಂಚಾರ ಅಪಾಯಕಾರಿಯಾಗಿದ್ದು, ಇದೀಗ ಜೂನ್ 14ರಿಂದ ವಾಹನ ಸಂಚಾರವನ್ನು ಬಂದ್ ಮಾಡಲಾಗುವುದೆಂದು ಸ್ಥಳೀಯರು ತಿಳಿಸಿದ್ದಾರೆ.
ಈ ರಸ್ತೆಯ ಮೂಲಕ ಸಂಚರಿಸುವ ಎಲ್ಲಾ ಪ್ರಯಾಣಿಕರು ಸಹಕರಿಸುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ 24ರಂದು ಮುಲ್ಲರಪಟ್ನ ಸೇತುವೆ ಮುರಿದು ಬಿದ್ದಿತು.
ಬಿಸಿರೋಡಿನಿಂದ ಕುಪ್ಪೆಪದವು ಕಟೀಲು ಬಜಪೆ ಸಂಪರ್ಕದ ಮುಲ್ಲರಪಟ್ನ ಸೇತುವೆ ಮುರಿದು ಬೀಳುವ ಮೂಲಕ ಈ ಭಾಗದ ಜನರ ಸಂಪರ್ಕ ಕಡಿತಗೊಂಡಿತ್ತು.
ಬಿಸಿರೋಡಿನಿಂದ ಕುಪ್ಪೆಪದವು ಹಾಗೂ ಮುಲ್ಲರಪಟ್ನದಿಂದ ಬಿಸಿರೋಡ್ ಕಡೆಗೆ ನಿತ್ಯ ಬರುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದಾಡಲು ಮುಲ್ಲರಪಟ್ನದಲ್ಲಿನ ತೂಗುಸೇತುವೆಯಲ್ಲಿ ಅವಕಾಶ ನೀಡಲಾಗಿತ್ತು. ತೂಗು ಸೇತುವೆಯ ಸಾಮಾರ್ಥ್ಯದ ಬಗ್ಗೆಯೂ ಸಾಕಷ್ಟು ಭಯಭೀತರಾಗಿದ್ದ ಜನ ಹೇಗೋ ಮಳೆಗಾಲ ಮುಗಿಯುವ ವರೆಗೂ ನಡೆದುಕೊಂಡು ಹೋಗಿದ್ದರು.
ಮಳೆ ಕಡಿಮೆಯಾಗುತ್ತಿದ್ದಂತೆ ಇಲ್ಲಿನ ಸಾರ್ವಜನಿಕರು ನದಿಗೆ ಮಣ್ಣು ಹಾಗೂ ಸಿಮೆಂಟ್ ಮೋರಿಗಳನ್ನು ಹಾಕಿ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಿದ್ದರು. ಈ ರಸ್ತೆಯ ಮೂಲಕ ಬಸ್ ಸಹಿತ ಘನ ವಾಹನಗಳು ಸಂಚಾರ ಮಾಡುತ್ತಿದ್ದವು.
ಆದರೆ ಮಳೆ ಪ್ರಾರಂಭವಾಗುತ್ತಿದ್ದಂತೆ ಈ ಮಣ್ಣು ಹಾಕಿದ ರಸ್ತೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಲಕ್ಷಣಗಳು ಕಾಣುತ್ತಿದ್ದು ಅಪಾಯದ ಸೂಚನೆ ನೀಡಿದೆ ಹಾಗಾಗಿ ಜೂನ್ 14ರಿಂದ ಈ ರಸ್ತೆಯನ್ನು ಬಂದ್ ಮಾಡಲಾಗುತ್ತದೆ ಎಂಬ ಸಂದೇಶ ವನ್ನು ಸ್ಥಳೀಯರು ರವಾನೆ ಮಾಡುತ್ತಿದ್ದಾರೆ.