ಉಳ್ಳಾಲ, ಜೂ 13 (Daijiworld News/SM): ಉಳ್ಳಾಲದ ಸೋಮೇಶ್ವರ ಪ್ರದೇಶದಲ್ಲಿ ಪ್ರತಿ ಬಾರಿ ಕಡಲ್ಕೊರೆತ ನಡೆಯುತ್ತಿದ್ದು, ಅಲ್ಲಿನ ಸ್ಥಳೀಯ ನಿವಾಸಿಗಳು ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲೆಗಳ ಅಬ್ಬರದಿಂದಾಗಿ ಪ್ರತೀ ಮಳೆಗಾಲದಲ್ಲಿ ಹಲವು ಮನೆಗಳಿಗೆ ಹಾನಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಶ್ವತ ಪರಿಹಾರ ಕ್ರಮವನ್ನು ಕೈಗೊಳ್ಳಲಾಗುವುದೆಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಕಡಲ್ಕೊರೆತ ತಡೆಗೆ ಸಾಮಾನ್ಯವಾಗಿ ಪ್ರತಿ ವರ್ಷ ಕಲ್ಲು ಹಾಸುವ ಕಾರ್ಯವನ್ನು ನಡೆಸಲಾಗುತ್ತಿದೆ. ಆದರೆ, ಅಬ್ಬರದ ಅಲೆಗಳಿಗೆ ಸಿಲುಕಿ ಹಾಸಲಾಗುವ ಕಲ್ಲುಗಳು ಸಮುದ್ರಪಾಲಾಗುತ್ತಿವೆ. ಇದರಿಂದ ಪ್ರತಿ ಸಲ ತೀರ ಪ್ರದೇಶದ ಜನತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದರು.
ಇದೀಗ ಕಡಲ್ಕೊರೆತ ತಡೆಗೆ ಬರ್ಮ್ ತಂತ್ರಜ್ಞಾನ ಬಳಸಲಾಗುತ್ತಿದ್ದು, ಇದರ ಮೂಲಕ 10 ಕಡೆಗಳಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ 2 ಕಡೆಗಳಲ್ಲಿ ಕಾಮಗಾರಿ ಮುಗಿದಿದ್ದು, ಜನರಿಂದ ಸಕಾರಾತ್ಮಕ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಉಳಿದ 8 ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಲ್ಲಿ ಮತ್ತಷ್ಟು ಪರಿಹಾರ ಕಾರ್ಯವಾಗಲಿದೆ ಎಂದರು.
ಪ್ರಸ್ತುತ ಉಚ್ಚಿಲ, ಉಳ್ಳಾಲ ಪ್ರದೇಶಗಳಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ಈ ಪ್ರದೇಶಗಳಲ್ಲಿ ಸಮುದ್ರ ಸವೆತ ತಡೆಗೆ ಅಧಿಕಾರಿಗಳು ತಾತ್ಕಾಲಿಕ ಪರಿಹಾರ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು.
ಇನ್ನು ಈ ಬಗ್ಗೆ ಸ್ಥಳಿಯರು, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ನಳಿನ್ ತಿಳಿಸಿದ್ದಾರೆ.