ಮಂಗಳೂರು, ಜೂ 13(Daijiworld News/MSP): ಭಾರೀ ನಿರೀಕ್ಷೆಯ ನಂತರ ಮಂಗಳೂರಿನಲ್ಲಿ ಸುರಿದ ಮೊದಲ ಮಳೆಗೆ ನಗರದಲ್ಲಿ ಹಲವಾರು ಆವಾಂತರಗಳು ಸೃಷ್ಟಿಯಾಗಿವೆ . ನಗರದ ಚರಂಡಿಗಳ ಅವ್ಯವಸ್ಥೆ, ಅಪೂರ್ಣ ಕಾಮಗಾರಿಗಳಿಂದ ಸಾರ್ವಜನಿಕರು ಸಂಕಷ್ಟಕ್ಕೊಳಗಾಗುವಂತಾಗಿದೆ.
ಕಳೆದ ಮಳೆಗಾಲದಲ್ಲಿ ಪಡೀಲ್ನಲ್ಲಿರುವ ರೈಲ್ವೆ ಅಂಡರ್ ಪಾಸ್ ನೀರು ನಿಂತು ಸಮಸ್ಯೆ ಆಗಿತ್ತು. ಆದರೆ ಈ ಬಾರಿ ಸಮಸ್ಯೆ ಕಮ್ಮಿಯಾಗುವ ಬದಲು, ಮತ್ತೊಂದು ಹೊಸ ಸಮಸ್ಯೆ ಸೃಷ್ಟಿಯಾಗಿದೆ. ಅಂಡರ್ಪಾಸ್ ಸಂಪೂರ್ಣ ಕೆಸರುಮಯವಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಪಡೀಲ್ ರೈಲ್ವೇ ಸೇತುವೆಯಲ್ಲಿ ರೈಲು ಹಳಿಗಳ ಇಕ್ಕೆಲಗಳಲ್ಲಿ ಮಣ್ಣು ಗುಡ್ಡೆ ಹಾಕಲಾಗಿತ್ತು. ಆದರೆ ಮಣ್ಣಿಗೆ ಸಂಬಂಧಿಸಿ ಸಮರ್ಪಕವಾಗಿ ವ್ಯವಸ್ಥೆ ಕಲ್ಪಿಸದ ಕಾರಣ ಮಳೆ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಮಣ್ಣು ಕೊಚ್ಚಿಕೊಂಡು ಬಂದು ಅಂಡರ್ ಪಾಸ್ ಒಳಗಡೆ ಶೇಖರಣೆಗೊಂಡಿದೆ.ಇದರ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ. ಸದ್ಯ ಅಂಡರ್ಪಾಸ್ ಒಳಗಿಂದ ಕೆಸರು ಮಣ್ಣನ್ನು ಜೆಸಿಬಿ ಸಹಾಯದಿಂದ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.