ನವದೆಹಲಿ ಡಿ 04: ಲವ್ ಜಿಹಾದಿ ಪ್ರಕರಣದ ಕೇಂದ್ರಬಿಂದು ವಾಗಿರುವ ಕೇರಳದ ಹಾದಿಯಾಳ ಪತಿ ಷಫಿನ್ ಜಹಾನ್ ಬಗ್ಗೆ ಕೆಲವೊಂದು ಮಾಹಿತಿ ಎನ್ಐಎ ಬಹಿರಂಗಪಡಿಸಿದೆ. ಇದರಲ್ಲಿ ಷಫಿನ್ ವಿವಾಹಕ್ಕೂ ಮುನ್ನವೇ ಉಗ್ರರ ಸಂಪರ್ಕದಲ್ಲಿದ್ದ ಅನ್ನುವ ಸ್ಪೋಟಕ ಮಾಹಿತಿಯನ್ನು ಹೊರಹಾಕಿದೆ.ಹಾದಿಯಾಳನ್ನು ಮದುವೆಯಾಗುವುದಕ್ಕೂ ಮುನ್ನವೇ, ಕೆಲವು ತಿಂಗಳ ಹಿಂದೆ ಎಸ್ ಡಿಪಿಐ ಸಂಘಟನೆಯ ರಾಜಕೀಯ ಸಂಘಟನೆಯಾಗಿರುವ ಪಿಎಫ್ಐ ನ ಕಾರ್ಯಕರ್ತರೂ ಸಕ್ರಿಯವಾಗಿದ್ದ ಫೇಸ್ ಬುಕ್ ಗ್ರೂಪ್ ಮೂಲಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಒಮರ್-ಅಲ್-ಹಿಂದಿ ಪ್ರಕರಣದ ಪ್ರಮುಖ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ಎನ್ಐಎ ಹೇಳಿದೆ.
ಇನ್ನು ಎನ್ ಐಎ ಪ್ರಕಾರ ಹಾದಿಯಾ-ಷಫಿನ್ ಜಹಾನ್ ವಿವಾಹಕ್ಕೆ ಕಾರಣವಾಗಿದ್ದು ವೇ ಟು ನಿಕಾಹ್ ಡಾಟ್ ಕಾಮ್ ಎಂಬ ಮ್ಯಾಟ್ರಿಮೋನಿ ವೆಬ್ ಸೈಟ್ ಅಲ್ಲ, ಬದಲಾಗಿ ಷಫಿನ್ ಜಹಾನ್ ನ ಸ್ನೇಹಿತ ಮುನೀರ್, ಮನ್ಸೀದ್ ಸೇರಿದಂತೆ ಎಸ್ ಡಿಪಿಐ ಸಹಚರರು ಈ ವಿವಾಹವನ್ನು ಏರ್ಪಡಿಸಿದರು, ಡಿಸೆಂಬರ್ 2016 ರಲ್ಲಿ ಇಬ್ಬರ ವಿವಾಹವಾಗಿದೆ ಎಂದು ತಿಳಿಸಿದೆ.
ಆದರೆ ಹಾದಿಯಾ ಪರ ವಕೀಲರು ಹೇಳುವಂತೆ ಕೊಲ್ಲಂ ಮೂಲದ ಷಫಿನ್ ಜಹಾನ್ ಓಮನ್ನಲ್ಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಹಾದಿಯಾಳ ಪ್ರೊಫೈಲ್ ಅನ್ನು ಆತ ಮುಸ್ಲಿಂ ಮ್ಯಾಟ್ರಿಮೋನಿಯಲ್ ವೆಬ್ಸೈಟ್ನಲ್ಲಿ 2016ರ ಏಪ್ರಿಲ್ನಲ್ಲಿ ನೋಡಿದ್ದ. ಆಕೆಯೇ ಪ್ರೊಫೈಲ್ ಕ್ರಿಯೇಟ್ ಮಾಡಿದ್ದಳು. ಆಕೆ ಮತಾಂತರಗೊಂಡ ಬಳಿಕವೇ ಶಫಿನ್ ಆಕೆಯನ್ನು ನೋಡಿದ್ದು ಎಂದು ಈ ಹಿಂದೆ ವಾದ ಮಾಡಿದ್ದರು.
ಇನ್ನು ಈ ಪ್ರಕರಣದ ಇತರ ಆರೋಪಿಗಳಾದ ಮನ್ಸೀದ್ ಹಾಗೂ ಪಿ ಸಫ್ವಾನ್ ಅವರೊಂದಿಗೆ ಷಫೀನ್ ಜಹಾನ್ ಸಂಪರ್ಕದಲ್ಲಿದ್ದ. ಒಮರ್-ಅಲ್-ಹಿಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರೂ ಆರೋಪಿಗಳನ್ನು ಕಳೆದ ಅಕ್ಟೋಬರ್ ನಲ್ಲಿ ಬಂಧಿಸಿ ಎನ್ಐಎ ಚಾರ್ಜ್ ಶೀಟ್ ಹಾಕಿತ್ತು.