ಉಳ್ಳಾಲ, ಜೂ 13(Daijiworld News/MSP): ಕೆಲವೇ ದಿನಗಳಲ್ಲಿ ಪಂಪ್ ವೆಲ್ ಫ್ಲೈಓವರ್ ಅನ್ನು ನವಯುಗ ಸಂಸ್ಥೆ ಬಿಟ್ಟುಕೊಡಬೇಕೆಂದು ಆದೇಶಿಸಲಾಗಿದೆ. ಮಳೆಯ ತೀವ್ರತೆ ಇಲ್ಲದೇ ಇದ್ದಲ್ಲಿ ಪಂಪ್ ವೆಲ್ ಫ್ಲೈಓವರ್ ಶೀಘ್ರದಲ್ಲೇ ಸಂಚಾರ ಮುಕ್ತ ಗೊಳಿಸಲಾಗುವುದು ಎಂದು ಸಂಸದ ಕಟೀಲ್ ತಿಳಿಸಿದರು. ಕಳೆದ ಎಂಟು ವರ್ಷಗಳ ಹಿಂದೆ ಆರಂಭಗೊಂಡ ಭಾರೀ ಪ್ರಚಾರ ಕಂಡ ತೊಕ್ಕೊಟ್ಟು ಫ್ಲೈಓವರ್ ಉದ್ಘಾಟನೆಯನ್ನು ಸಂಸದ ನಳಿನ್ ಕಟೀಲ್ ಗುರುವಾರ ನೆರವೇರಿಸಿದರು. ಈ ಮೂಲಕ ಇಂದಿನಿಂದ ತೊಕ್ಕೊಟ್ಟು ಫ್ಲೈಒವರ್ ವಾಹನ ಸಂಚಾರಕ್ಕೆ ಮುಕ್ತವಾಯಿತು.
ಸರಕಾರದಿಂದ ಸಂಸ್ಥೆಗೆ ಸಿಗಬೇಕಾದ ಹೆಚ್ಚುವರಿ ರೂ. 7 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಯುದ್ದೋಪಾದಿಯಲ್ಲಿ ನವಯುಗ ಸಂಸ್ಥೆ ಪಂಪ್ ವೆಲ್ ಫ್ಲೈಓವರ್ ಕಾಮಗಾರಿ ಪೂರ್ಣಗೊಳಿಸಬೇಕಿದೆ. ತೊಕ್ಕೊಟ್ಟು ಮೇಲ್ಸೇತುವೆ ಬಿಡುಗಡೆಯಿಂದಾಗಿ ಕಾಸರಗೋಡು, ತಲಪಾಡಿ, ಉಡುಪಿಗೆ, ಮಂಗಳೂರಿಗೆ ಹೋಗುವ ವಾಹನ ಸವಾರರು ಸುಗಮವಾಗಿ ಸಆಗಬಹುದು, ತೊಕ್ಕೊಟ್ಟು ಬ್ಲಾಕ್ ಸಮಸ್ಯೆಗೆ ಪರಿಹಾರ ದೊರೆತಿದೆ ಎಂದ ಅವರು ತಲಪಾಡಿ- ಕುಂದಾಫುರ ರಾ.ಹೆಯ ತೊಕ್ಕೊಟ್ಟು ಪಂಪ್ ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿದೆ. ನವಯುಗ ಸಂಸ್ಥೆ ಕಾರ್ಯಾಚರಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿದೆ. 4-5 ವರ್ಷಗಳಿಂದ ಕಾಮಗಾರಿ ತಾಂತ್ರಿಕ ಅಡಚಣೆಯಿಂದ ವಿಳಂಬವಾಗಿದೆ. ಟೀಕೆಗಳ ಮಧ್ಯೆ ಕಾಮಗಾರಿ ಪೂರ್ಣಗೊಂಡಿದೆ. ಆರ್ಥಿಕ ಅಡಚಣೆಯಿಂದ ಸಂಸ್ಥೆ ಸಮಸ್ಯೆಯಲ್ಲಿ ಸಿಲುಕಿದಾಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮುಂದೆ ನಿಂತು 55 ಕೋಟಿ ರೂ. ಸಂಸ್ಥೆಗೆ ಸಾಲ ಕೊಡಿಸುವ ಮುಖಾಂತರ ಮಾರ್ಚ್ನಿಂದ ಕಾಮಗಾರಿಗೆ ಮತ್ತೆ ವೇಗ ನೀಡಲಾಗಿದೆ. ಕಾನೂನಾತ್ಮಕ ಸಮಸ್ಯೆಯಿಂದ ಎರಡು ವರ್ಷಗಳ ಕಾಲ ಕಾಮಗಾರಿ ಕುಂಟಿತವಾಗಿತ್ತು. ಜನರ ಸಮಸ್ಯೆಯನ್ನು ಮುಂದೆ ಕೊಂಡು ಹೋಗಬಾರದು ಅನ್ನುವ ಉದ್ದೇಶದಿಂದ ಕಾನೂನಿನ ಅಡೆತಡೆಗಳಿದ್ದರೂ ಫ್ಲೈಓವರ್ ಉದ್ಘಾಟಿಸಲಾಗಿದೆ. ಸಚಿವರು , ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಉಳ್ಳಾಲ ಬೈಪಾಸ್, ಕಲ್ಲಾಪು ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಅಧಿಕಾರಿಗಳ ಜತೆಗೆ ಸಭೆಯನ್ನು ಕರೆದು ಶೀಘ್ರವೇ ಪರಿಹಾರ ಕಂಡುಕೊಳ್ಳಲು ಸೂಚಿಸುತ್ತೇನೆ. ಮುಂದೆ ಫ್ಲೈಓವರ್ ಗೆ ಸುಂದರೀಕರಣಗೊಳಿಸುವ ಕೆಲಸವನ್ನು ಆರಂಭಿಸಲಾಗುವುದು. ವಾಹನಗಳ ಪಾರ್ಕಿಂಗ್, ರಿಕ್ಷಾ ಚಾಲಕರಿಗೆ ಪಾರ್ಕಿಂಗ್, ಶೌಚಾಲಯ, ಗಾರ್ಡನಿಂಗ್ ನಿರ್ಮಿಸುವ ಚಿಂತನೆ ನಡೆಸಲಾಗುವುದು. ಸುರತ್ಕಲ್, ಕೂಳೂರು ಮಾದರಿಯಲ್ಲಿ ತೊಕ್ಕೊಟ್ಟು ಮೇಲ್ಸೇತುವೆಯೂ ಸುಂದರೀಕರಣ ಆಗಲಿದೆ.
ಎರಡು ಪಥಗಳಿಗೂ ತೆಂಗಿನಕಾಯಿ ಒಡೆದು ಚಾಲನೆ ನೀಡಿದ ಸಂಸದರು, ವಾಹನ ಸವಾರರು ಸುರಕ್ಷಿತವಾಗಿ ತೆರಳುವಂತೆಯೂ ಕಲ್ಲಾಪು ನಾಗಬ್ರಹ್ಮ ಕಟ್ಟೆಗೆ ತೆಂಗಿನ ಕಾಯಿ ಒಡೆದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಬಿಜೆಪಿ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ್ ಕುಂಪಲ, ಮಾಜಿ ಶಾಸಕ ಜಯರಾಮ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಮುಖಂಡ ಚಂದ್ರಶೇಖರ್ ಉಚ್ಚಿಲ್, ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಶ್ ಆಳ್ವ, ರಾಜ್ಯ ಕಾರ್ಯಕಾರಿಣಿ ಮಂಡಳಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನರಾಜ್ ಕೆ.ಆರ್, ನಗರಸಭೆ ಸದಸ್ಯರಾದ ರಾಜೇಶ್ ಕೆರೆಬೈಲ್, ಗೀತಾ ಭಾಯಿ, ದಕ್ಷಿಣ ರೈಲ್ವೇ ಸಲಹಾ ಮಂಡಳಿ ಚಂದ್ರಹಾಸ್ ಅಡ್ಯಂತಾಯ, ಮುಖಂಡರುಗಳಾದ ಸೀತಾರಾಮ ಬಂಗೇರ, ಲಲಿತಾ ಸುಂದರ್, ಚಂದ್ರಹಾಸ್ ಪಂಡಿತ್ ಹೌಸ್, ಪ್ರಕಾಶ್ ಸಿಂಫೋನಿ, ಜೀವನ್ ಕುಮಾರ್ ತೊಕ್ಕೊಟ್ಟು, ನಮಿತಾ ಶ್ಯಾಂ ಮುಂತಾದವರು ಉಪಸ್ಥಿತರಿದ್ದರು.