ಮಂಗಳೂರು, ಫೆ.20 (DaijiworldNews/AK):ಭಾರತೀಯ ಜ್ಞಾನ ಪರಂಪರೆ ವಿಶ್ವದೆಲ್ಲೆಡೆ ಹರಡಿದ್ದು ಅದು ಹೊಟ್ಟೆ ತುಂಬಿಸುವ ವಿದ್ಯೆ ಅಲ್ಲ. ಅದು ಜ್ಞಾನದ ಹೃದಯವಾಗಿದೆ. ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಗಳ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ಭಾರತೀಯ ಜ್ಞಾನವನ್ನು ಉಳಿಸುವ, ಅಧ್ಯಯನ, ಮತ್ತು ಪ್ರಾಯೋಗಿಕವಾಗಿ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸಲು ಮಹತ್ವದ ಹೆಜ್ಜೆಯನ್ನಿರಿಸಲಾಗಿದೆ ಎಂದು ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಸ್ವಾಮೀಜಿ ಹೇಳಿದರು.

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಮಾರ್ಗದರ್ಶನದಲ್ಲಿ ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದಲ್ಲಿ ಭಾರತೀಯ ಪಾರಂಪರಿಕ ಜ್ಞಾನ ವ್ಯವಸ್ಥೆಗಳ ಕೇಂದ್ರವನ್ನು ಬುಧವಾರ ಆವಿಷ್ಕಾರ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ನಿಟ್ಟೆ ವಿವಿಯಲ್ಲಿ ನೂತನ ಕೇಂದ್ರದ ಆರಂಭದ ಮೂಲಕ ಜ್ಞಾನ ಹಂಚುವಿಕೆಯಲ್ಲಿ ನಿಟ್ಟೆ ಸಂಸ್ಥೆಯಿಂದಲೇ ದಾಖಲಾರ್ಹ ಸಾಧನೆ ಮಾಡುವುದರ ಜೊತೆಗೆ ಪ್ರಪಂಚಕ್ಕೆ ಹೊಸ ಭಾಷ್ಯ ಬರೆಯುವುದು ಖಚಿತ ಎಂದರು.
ಉಪಕುಲಾಧಿಪತಿ ಡಾ. ಎಮ್. ಶಾಂತಾರಾಮ್ ಶೆಟ್ಟಿ ಮಾತನಾಡಿ, 2020ರಲ್ಲಿ ರಾಷ್ಟ್ರೀಯ ಶೈಕ್ಷಣಿಕ ನೂತನ ನಿಯಮ ಅಧೀನಕ್ಕೆ ಬಂತು. ನೂತನ ಶೈಕ್ಷಣಿಕ ವಿಧಾನದಿಂದ ಒಬ್ಬ ಉತ್ತಮ ಪ್ರಜೆಯನ್ನು ಸೃಷ್ಟಿಸುವುದೇ ಮೊದಲ ಆದ್ಯತೆ. ವೈದ್ಯಕೀಯ ಶಾಸ್ತ್ರದಲ್ಲಿ ಚರಕ, ಶುಶ್ರುತ, ಗಣಿತ ಶಾಸ್ತ್ರದ ದಿಕ್ಕನ್ನೇ ಬದಲಿಸಿದ ಅರ್ಯಭಟ, ಪತಂಜಲಿ, ಅರ್ಥಶಾಸ್ತ್ರದ ಚಾಣಕ್ಯ, ನಾಗಾರ್ಜುನ, ಆಚಾರ್ಯ ಕಪಿಲ, ಭಾಸ್ಕರ, ಕಣ್ವ ಮಹರ್ಷಿ ಅವರ ಸಂಶೋಧನೆ ಎಲ್ಲವೂ ಪ್ರಪಂಚಕ್ಕೆ ಪುರಾತನ ಜ್ಞಾನವನ್ನು ಸಾರಿದೆ ಎಂದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಮ್. ಎಸ್. ಮೂಡಿತ್ತಾಯ ಸ್ವಾಗತಿಸಿದರು. ಹಣಕಾಸು ಮತ್ತು ಯೋಜನಾ ನಿರ್ದೇಶಕ ರಾಜೇಂದ್ರ, ಕುಲಸಚಿವ ಹರ್ಷ ಹಾಲಹಳ್ಳಿ ಉಪಸ್ಥಿತರಿದ್ದರು.