ಮಂಗಳೂರು, ಜೂ13(Daijiworld News/SS): ಕರಾವಳಿಯಲ್ಲಿ ಕಡಲು ಪ್ರಕ್ಷುಬ್ಧಗೊಂಡಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ.
ಭಾರೀ ಗಾಳಿ-ಮಳೆಗೆ ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಾಗೂ ವಾಯು ಚಂಡಮಾರುತದಿಂದ ಕಡಲಕೊರೆತ ಉಂಟಾಗಿರುವ ಪ್ರದೇಶಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು ಹೊರವಲಯದ ಉಚ್ಚಿಲ ಸೋಮೇಶ್ವರದ ಭಟ್ಟಂಪಾಡಿಗೆ ಭೇಟಿ ನೀಡಿದ ಬಿಜೆಪಿ ಸಂಸದೀಯ ಮಂಡಳಿ ಸಚೇತಕರಾದ ನಳಿನ್ ಕುಮಾರ್ ಕಟೀಲ್, ಕಡಲು ಕೊರೆತದ ಪ್ರಭಾವವನ್ನು ವೀಕ್ಷಿಸಿದ್ದು, ಸಂತ್ರಸ್ತರಿಗೆ ಸಹಾಯದ ಭರವಸೆಯನ್ನು ನೀಡಿದ್ದಾರೆ.