ಮಂಗಳೂರು, ಜೂ 13(Daijiworld News/MSP): ತಂದೆ ಮತ್ತು ಮಗನ ಫೋಟೊಗಳನ್ನು ಫೇಸ್ಬುಕ್ ಖಾತೆಯಿಂದ ತೆಗೆದು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಟ್ಟಿರುವ ಆರೋಪದ ಮೇಲೆ ‘ಮಂಗಳೂರು ರಾಜಕೀಯ’ ವಾಟ್ಸ್ ಆ್ಯಪ್ ಗುಂಪಿನ ಅಡ್ಮಿನ್ ಸರ್ಫಾಕ್ ಖಾನ್ ಅಲಿಯಾಸ್ ಚಂದಾ ಅಶ್ರಫ್ ಎಂಬಾತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ಅಪರಾಧ (ಸಿಇಎನ್) ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆರೋಪಿ ಸರ್ಫಾಕ್ ಖಾನ್ ಕುವೈಟ್ನಲ್ಲಿ ಕೆಲಸ ಮಾಡುತ್ತಿದ್ದಾನೆ. ಬೆಳ್ತಂಗಡಿ ತಾಲ್ಲೂಕು ಸೋಣಂದೂರು ಗ್ರಾಮದ ಪಣಕಜೆ ನಿವಾಸಿಯಾಗಿದ್ದು ಸೌದಿ ಅರೇಬಿಯಾದಲ್ಲಿರುವ ಮಹಮ್ಮದ್ ಮತ್ತು ಪಣಕಜೆಯಲ್ಲಿ ನೆಲೆಸಿರುವ ಅವರ ಮಗ ಮೊಹಮ್ಮದ್ ಶಫಾನ್ ಎಂಬುವವರ ಫೋಟೊಗಳನ್ನು ಎಡಿಟ್ ಮಾಡಿ ಹರಿಯಬಿಟ್ಟಿರುವ ಆರೋಪದ ಮೇಲೆ ಸರ್ಫಾಕ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸಲಾಗಿದೆ.
ಮಹಮ್ಮದ್ ಅವರ ಸಂಬಂಧಿ ಪಣಕಜೆ ನಿವಾಸಿ ಆದಂ ಎಂಬುವವರು ನೀಡಿರುವ ದೂರನ್ನು ಆಧರಿಸಿ ಈ ಪ್ರಕರಣ ದಾಖಲು ಮಾಡಲಾಗಿದೆ. ವೈಯಕ್ತಿಕ ದ್ವೇಷದಿಂದ ಮಹಮ್ಮದ್ ಮತ್ತು ಮೊಹಮ್ಮದ್ ಶಫಾನ್ ಫೋಟೊಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.