ಮಂಗಳೂರು, ಜೂ13(Daijiworld News/SS): ಕರಾವಳಿಯಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದಂತೆ ಸಮುದ್ರದ ರೌದ್ರ ನರ್ತನ ಆರಂಭವಾಗಿದೆ. ಕರಾವಳಿಯುದ್ದಕ್ಕೂ ತೀರ ಪ್ರದೇಶದಲ್ಲಿ ಸಮುದ್ರದ ಆಳೆತ್ತರದ ಅಲೆಗಳು ತೀರಕ್ಕೆ ನುಗ್ಗುತ್ತಿವೆ. ಪರಿಣಾಮ ಕರಾವಳಿಯಲ್ಲಿ ಕಡಲಕೊರೆತ ತೀವ್ರಗೊಂಡಿದೆ.
ನಗರದ ಹೊರವಲಯದ ಸಸಿಹಿತ್ಲು ಮುಂಡ ಬೀಚ್ನ ಅಳಿವೆಯಲ್ಲಿ ಭಾರೀ ನದಿ ಕೊರೆತ ಉಂಟಾಗಿದ್ದು, ನದಿ ತೀರದ ಹಲವು ಮರಗಳು ಹಾಗೂ ಪ್ರವಾಸಿಗರಿಗಾಗಿ ಕುಳಿತುಕೊಳ್ಳಲು ಹಾಕಲಾಗಿದ್ದ ಬೆಂಚುಗಳು ನದಿಯ ಪಾಲಾಗಿ ಸಮುದ್ರದ ಒಡಲಿಗೆ ಸೇರುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಹಳೆಯಂಗಡಿ ಗ್ರಾಮ ಪಂಚಾಯಿತಿ ನಿರ್ಮಾಣ ಮಾಡಿದ್ದ 3 ಅಂಗಡಿಗಳಲ್ಲಿ ಒಂದು ಕಳೆದೆರಡು ತಿಂಗಳ ಮೊದಲೇ ನದಿ ಪಾಲಾಗಿದ್ದು ಇದೀಗ ಮತ್ತೊಂದು ಕೋಣೆಯು ಅಪಾಯದಲ್ಲಿದೆ. ಮುಂಡಾ ಬೀಚ್ ಅಳಿವೆಯಲ್ಲಿ ಉಂಟಾಗಿರುವ ಕಡಲಕೊರೆತದಿಂದ 5 ಸಿಮೆಂಟ್ ಬೆಂಚುಗಳು ಹಾಗೂ 10 ಹೆಚ್ಚು ಮರಗಳು ಕಡಲ ಒಡಲು ಸೇರಿವೆ.
ಸಮುದ್ರ ಕೊರೆತಕ್ಕೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿರುವುದರಿಂದ ಬೀಚ್ಗೆ ತೆರಳುವ ರಸ್ತೆ ಸಹಿತ ಬೀಚ್ ದ್ವಾರದ ಕಚೇರಿ ಮತ್ತಿತರ ಪಶ್ಚಿಮ ದಿಕ್ಕಿನ ಜಮೀನಿಗೂ ಯಾವುದೇ ಹಾನಿಯಾಗಿಲ್ಲ. ಅಳಿವೆಯಲ್ಲಿ ಶಾಶ್ವತ ಗೋಡೆಯನ್ನು ನಿರ್ಮಿಸಿದಲ್ಲಿ ಮಾತ್ರ ಬೀಚ್ ಉಳಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಂಗಳೂರು ಹೊರವಲಯದ ಸೋಮೆಶ್ವರ ಹಾಗು ಉಚ್ಚಿಲ ಪ್ರದೇಶದಲ್ಲಿಯೂ ಕಡಲ್ಕೊರೆತ ಮುಂದುವರೆದಿದ್ದು, ಮನೆಗಳಿಗೆ ಹಾನಿಯಾಗಿರುವ ಘಟನೆ ವರದಿಯಾಗಿದೆ.