ಮಂಗಳೂರು, ಜೂ 12 (Daijiworld News/SM): ಸಾಮಾಜಿಕ ಜಾಲ ತಾಣವಾದ ಫೇಸ್ ಬುಕ್ ನಲ್ಲಿ ಅಪ್ ಲೋಡ್ ಮಾಡಲಾದ ಫೋಟೋಗಳನ್ನು ತೆಗೆದು ಅವುಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸಪ್ ಗಳಲ್ಲಿ ಹರಿಯ ಬಿಡಲಾಗುತ್ತಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವ ಘಟನೆ ನಡೆದಿದೆ.
ಬೆಳ್ತಂಗಡಿ ಮೂಲದ ಆದಂ ಎಂಬವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಚಂದಾ ಅಶ್ರಫ್ ಯಾನೆ ಸರ್ಫಾಕ್ ಕಣ್ಣೂರು ಎಂಬಾತ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಘಟನೆಯ ವಿವರ:
ಕಣ್ಣೂರು ನಿವಾಸಿಯಾಗಿರುವ ಚಂದಾ ಯಾನೇ ಸರ್ಫಾಕ್, ಮಂಗಳೂರು ರಾಜಕೀಯ ಎಂಬ ಗ್ರೂಪ್ ಮಾಡಿ ರಾಜಕೀಯ ನಾಯಕರು, ಉದ್ಯಮಿಗಳು, ಉನ್ನತ ಉದ್ಯೋಗಸ್ಥರು, ಗಣ್ಯ ವ್ಯಕ್ತಿಗಳನ್ನು ತನ್ನ ಗ್ರೂಪ್ ನಲ್ಲಿ ಸೇರಿಸಿಕೊಂಡಿದ್ದ.
ರಾಜಕೀಯ ಚರ್ಚೆ ಮಾಡುವ ನಾಟಕ ಮಾಡಿ ಗ್ರೂಪ್ ನಲ್ಲಿದ್ದ ಕೆಲವೊಂದು ವ್ಯಕ್ತಿಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಅವರ ಫೋಟೊಗಳನ್ನು ಫೇಸ್ ಬುಕ್ ಖಾತೆಯಿಂದ ತೆಗೆದು ಅವರ ಫೋಟೋಗಳನ್ನು ಅಶ್ಲೀಲವಾಗಿ ಜೋಡಣೆ ಮಾಡಿ ಅವರನ್ನು ಹಣಕ್ಕಾಗಿ ಬೆದರಿಸುತ್ತಿದ್ದ ಎಂದು ಆದಂ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. ಇದೀಗ ವಿದೇಶದಲ್ಲಿರುವ ತನ್ನ ಸಹೋದರರ ಪೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ ಎಂದು ಇದೇ ದೂರಿನಲ್ಲಿ ಆದಂ ವಿವರಿಸಿದ್ದಾರೆ.