ಮಂಗಳೂರು, ಫೆ.07 (DaijiworldNews/AA): ಭಾರತದ ಅತ್ಯುತ್ತಮ ಆಹಾರ ಮತ್ತು ಪಾನೀಯಗಳನ್ನು ಗುರುತಿಸಿ, ಗೌರವಿಸುವ ಫುಡ್ "ಕನೋಸರ್ಸ್ ಇಂಡಿಯಾ ಅವಾರ್ಡ್ಸ್ ನ ಏಳನೇ ಆವೃತ್ತಿಯಲ್ಲಿ ಮಂಗಳೂರಿನ ಮಾಸ್ಟರ್ ಶೆಫ್ ಮಹಮ್ಮದ್ ಆಶಿಕ್ ಅವರಿಗೆ 'ಸೌತ್ ಇಂಡಿಯಾ ಯಂಗ್ ಶೆಫ್ ಆಫ್ ದಿ ಇಯರ್' ಪ್ರಶಸ್ತಿ ಲಭಿಸಿದೆ.


ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಬೆಂಗಳೂರಿನ ತಾಜ್ ಯಶವಂತಪುರ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಬಂದ ಅತ್ಯುತ್ತಮ ಶೆಫ್ ಗಳು, ರೆಸ್ಟೋರೆಂಟ್ ಗಳು ಮತ್ತು ಫುಡ್ ಬ್ರಾಂಡ್ ಗಳು ಪಾಲ್ಗೊಂಡಿದ್ದರು. ಮಂಗಳೂರಿನ ಪ್ರತಿಭೆ ಮಾಸ್ಟರ್ ಶೆಫ್ ಮಹಮ್ಮದ್ ಆಶಿಕ್ ಈ ಪ್ರಶಸ್ತಿ ಪಡೆಯುವ ಮೂಲಕ ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ಎತ್ತಿಹಿಡಿದ್ದಾರೆ.
ಪ್ರಶಸ್ತಿ ಪಡೆದ ನಂತರ ಮಾಸ್ಟರ್ ಶೆಫ್ ಮಹಮ್ಮದ್ ಆಶಿಕ್ ಅವರು ಮಾತನಾಡುತ್ತಾ, "ಈ ಪ್ರಶಸ್ತಿಯನ್ನು ಪ್ರಮುಖವಾಗಿ ಆಹಾರದ ಗುಣಮಟ್ಟ, ಸೃಜನಾತ್ಮಕತೆ ಮತ್ತು ಅನುಭವಗಳನ್ನು ಆಧರಿಸಿ ನೀಡಲಾಗುತ್ತದೆ. ಈ ಬಾರಿ ಕನ್ನಡ ನಾಡಿನ ಹಲವಾರು ರೆಸ್ಟೋರೆಂಟ್ ಗಳು ಮತ್ತು ಶೆಫ್ ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನನಗೆ ಈ ಪ್ರಶಸ್ತಿ ಲಭಿಸಿದ್ದು ಗೌರವದ ಸಂಗತಿ. ಇದು ನನ್ನ ಕುಟುಂಬ, ಸ್ನೇಹಿತರು ಮತ್ತು ಜಿಲ್ಲೆಯ ಜನರ ಸಹಕಾರದ ಫಲವಾಗಿದೆ. ಈ ಪ್ರಶಸ್ತಿ ನನಗೆ ಇನ್ನಷ್ಟು ಸಾಧನೆ ಮಾಡಲು ಸ್ಪೂರ್ತಿ ನೀಡಿದೆ" ಎಂದರು.
ಇನ್ನು ಈ ಕಾರ್ಯಕ್ರಮದ ಮೂಲಕ ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿ ಮತ್ತು ಪ್ರತಿಭಾವಂತ ಶೆಫ್ ಗಳ ಸಾಧನೆಗಳನ್ನು ಗುರುತಿಸಲಾಯಿತು. ಮಂಗಳೂರಿನ ಮಾಸ್ಟರ್ ಶೆಫ್ ಮಹಮ್ಮದ್ ಆಶಿಕ್ ಅವರ ಈ ಸಾಧನೆ ಜಿಲ್ಲೆಯ ಆಹಾರ ಕ್ಷೇತ್ರದ ಹೆಮ್ಮೆಯಾಗಿದೆ.