ಮಂಗಳೂರು, ಫೆ.07 (DaijiworldNews/AA): 'ಡಾ.ಪಿ ದಯಾನಂದ ಪೈ ಎಸ್ಬಿಎಫ್ ಯುವ ಮಹೋತ್ಸವ 2025'ವು ಮಂಗಳೂರಿನ ಡಾನ್ ಭಾಸ್ಕೋ ಹಾಲ್ನಲ್ಲಿ ಫೆಬ್ರವರಿ 8 ಮತ್ತು 9ರಂದು ನಡೆಯಲಿದೆ.


ಫೆ.8ರಂದು ಬೆಳಗ್ಗೆ 8.30ರಿಂದ ರಾಷ್ಟ್ರೀಯ ಮಟ್ಟದ ಸಂಗೀತ ಸ್ಪರ್ಧೆಯ ಅಂತಿಮ ಸುತ್ತು ನಡೆಯಲಿದೆ. ದೇಶದ ನಾನಾ ಭಾಗದ 24 ಸ್ಪರ್ಧಿಗಳು ವಾದ್ಯ ವಾದನ ಹಾಗೂ ಹಾಡುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ತಿಳಿಸಿದೆ.
ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಪಂ. ರೋನು ಮುಜುಂದಾರ್, ಉಸ್ತಾದ್ ರಫೀಕ್ ಖಾನ್, ಪಂ. ಜಯತೀರ್ಥ ಮೇವುಂಡಿ, ಪ್ರಖ್ಯಾತ ಯುವ ತಬ್ಲಾ ವಾದಕ ಪಂ.ಯಶವಂತ್ ವೈಷ್ಣವ್, ವಿದೂಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್ ಹಾಗೂ ಪ್ರಖ್ಯಾತ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಅವರ ತಂಡವು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಲಿದ್ದಾರೆ.
ಪ್ರಥಮ ಸ್ಥಾನಿಗೆ ರೂ.60 ಸಾವಿರ, ದ್ವಿತೀಯ ಸ್ಥಾನಿಗೆ ರೂ.40 ಸಾವಿರ ಹಾಗೂ ತೃತೀಯ ಸ್ಥಾನಿಗೆ ರೂ.20 ಸಾವಿರ ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಪ್ರಥಮ ಸ್ಥಾನ ವಿಜೇತರಿಗೆ ಸ್ವರ ಭಾರತಿ ಬಿರುದು ಪ್ರದಾನ ಮಾಡಲಾಗುವುದು.
ಜುಗಲ್ ಬಂಧಿ:
ಫೆ. 9ರಂದು ಸಂಜೆ 5ರಿಂದ ಸಮಾರೋಪ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದ ಬಳಿಕ ಮುಂಬೈನ ಪಂ. ರೋನು ಮುಜುಂದಾರ್, ಹುಬ್ಬಳ್ಳಿಯ ಪಂ.ಜಯತೀರ್ಥ ಮೇವುಂಡಿ ಮತ್ತು ಉಸ್ತಾದ್ ರಫೀಕ್ ಖಾನ್ ಇವರ ಬಾನ್ಸುರಿ-ಗಾಯನ-ಸಿತಾರ್ ಜುಗಲ್ ಬಂಧಿ ಕಾರ್ಯಕ್ರಮ ನಡೆಯಲಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮುಂಬೈನ ಪಂ.ಯಶವಂತ್ ವೈಷ್ಣವ್ ತಬ್ಲಾದಲ್ಲಿ ಹಾಗೂ ಪ್ರೊ. ನರೇಂದ್ರ ಎಲ್.ನಾಯಕ್ ಹಾರ್ಮೊನಿಯಂನಲ್ಲಿ ಸಹಕಾರ ನೀಡಲಿದ್ದಾರೆ.
ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಎರಡೂ ದಿನದ ಕಾರ್ಯಕ್ರಮವು ಉಚಿತ ಪ್ರವೇಶ ಇರುತ್ತದೆ. ಸಾರ್ವಜನಿಕರಿಗೆ, ಸಂಗೀತ ವಿದ್ಯಾರ್ಥಿಗಳಿಗೆ ಹಾಗೂ ಸಂಗೀತಾಸಕ್ತರು ಇರದ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.
ವಿಶೇಷ ತರಗತಿ
ಫೆ. 9ರಂದು ಮಾಸ್ಟರ್ ತರಗತಿಯಲ್ಲಿ ಉಸ್ತಾದ್ ರಫೀಕ್ ಖಾನ್, ಡಾ. ಶಶಾಂಕ್ ಮಕ್ತೇದಾರ್ ಹಾಗೂ ಬೆಂಗಳೂರಿನ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರು ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಈ ಸಂಗೀತ ವಿಶೇಷ ತರಗತಿಗಳಲ್ಲಿ ಭಾಗವಹಿಸಲು ಇಚ್ಛಿಸುವ ಸಂಗೀತಾಸಕ್ತರು ಮತ್ತು ಸಂಗೀತ ವಿದ್ಯಾರ್ಥಿಗಳು masterclass.sangeetbharati.orgನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.