ಉಡುಪಿ,ಫೆ.06(DaijiworldNews/TA): ರಾಜಕಾರಣಕ್ಕಿಂತಲೂ ಹೆಚ್ಚಾಗಿ ಜನರ ಸಮಸ್ಯೆಗಳ ಸ್ಪಂದಿಸದ ಸರಕಾರದ ವಿರುದ್ಧ ಈ ಪ್ರತಿಭಟನೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ಸುನೀಲ್ ಕುಮಾರ್ ನೇತೃತ್ವದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಕಾರ್ಕಳ ತಾಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ, ದಂಡ ಪಿಂಡಗಳು ಹಾಡಿನ ಮೂಲಕ ಸರ್ಕಾರವನ್ನು ಟೀಕಿಸಿ ಸರಕಾರದ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ಕರಾವಳಿಯ ಯಕ್ಷಗಾನ, ಕೋಳಿ ಅಂಕ, ಪ್ರವಾಸೋದ್ಯಮಕ್ಕೂ ಕಾಂಗ್ರೆಸ್ ಸರಕಾರ ಅಡ್ಡಿ ಪಡಿಸುತ್ತಿದ್ದು ಇದೊಂದು ಹಿಂದೂ ವಿರೋಧಿ ಸರಕಾರ ಎಂದು ಸುನೀಲ್ ಕುಮಾರ್ ಟೀಕಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ವಿರುದ್ಧ ಜನಾಂದೋಲನ ಕಾರ್ಕಳದಿಂದ ಇಂದು ಪ್ರಾರಂಭವಾಗಿದೆ, ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ತನಕ ಈ ಜನಾಂದೋಲನವನ್ನು ನಾವು ಕೊಂಡೊಯ್ಯಲಿದ್ದೇವೆ ಎಂದರು. ದಪ್ಪ ಚರ್ಮದ ಎಮ್ಮೆ ಚರ್ಮದ ಸರಕಾರ ಎಂಬುದಾಗಿ ಕಾಂಗ್ರೆಸ್ ಸರಕಾರದ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸರಕಾರಕ್ಕೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು 60% ಸರ್ಕಾರ ಎಂದು ಲೇವಡಿ ಮಾಡಿದರು. ರಾಜ್ಯ ಸರಕಾರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಇದಲ್ಲದೆ ಹಾಲು, ಸಬ್ಸಿಡಿ, ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ ಸೇರಿದಂತೆ ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಪ್ರತಿಭಟನಾಕಾರರು ಖಂಡಿಸಿದರು.