ಮಂಗಳೂರು, ಜೂ12(Daijiworld News/SS): ನಗರದ ಹೊರವಲಯದ ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಸಮುದ್ರದ ಅಲೆಗಳು ಅಪ್ಪಳಿಸಿದ ಪರಿಣಾಮ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕರಾವಳಿಯಲ್ಲಿ ಮಳೆಯ ಅಬ್ಬರಕ್ಕೆ ಕಡಲ್ಕೊರೆತ ಹೆಚ್ಚಾಗಿದ್ದು, ಉಳ್ಳಾಲದಲ್ಲಿ ಮತ್ತೆ ತೀವ್ರ ಕಡಲ್ಕೊರೆತ ಉಂಟಾಗಿದೆ. ಕಡಲು ಪ್ರಕ್ಷುಬ್ಧಗೊಂಡಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಕೆಲ ಭಾಗದಲ್ಲಿ ಕಡಲ ಕೊರೆತ ಉಂಟಾಗುತ್ತಿದ್ದು, ಕಡಲ ತಡಿಯಲ್ಲಿ ವಾಸಿಸುವ ಜನರು ಆತಂಕಗೊಂಡಿದ್ದಾರೆ. ಭಾರೀ ಮಳೆಗೆ ಸಮುದ್ರದಲ್ಲಿ ಅಲೆಗಳು ಏಳುತ್ತಿದ್ದು, ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲ ತೀರದಲ್ಲಿ ಅಲೆಗಳು ತೀರಕ್ಕೆ ಅಪ್ಪಳಿಸುತ್ತಿದೆ.
ಸಮುದ್ರದ ಅಲೆಗಳ ರಭಸಕ್ಕೆ 10ಕ್ಕೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯಾಗಿದೆ. 50ಕ್ಕೂ ಹೆಚ್ಚು ಮರಗಳು ಸಮುದ್ರ ಪಾಲಾಗಿವೆ. ಉಳ್ಳಾಲದ ಇತರ ಭಾಗಗಳಲ್ಲಿಯೂ ಕಡಲ್ಕೊರೆತದ ಭೀತಿ ಎದುರಾಗಿದೆ. ಉಳ್ಳಾಲದ ಕೈಕೋ ಪ್ರದೇಶದ ಎಂಟು ಮನೆಗಳು ಕಡಲ ಪಾಲಾಗುವ ಭೀತಿ ಎದುರಿಸುತ್ತಿವೆ ಎಂದು ತಿಳಿದುಬಂದಿದೆ.
ಈಗಾಗಲೇ ಮಂಗಳೂರು ಹೊರವಲಯದ ಪಣಂಬೂರು, ತಣ್ಣೀರುಬಾವಿ, ಉಳ್ಳಾಲ, ಸೋಮೇಶ್ವರ ಕಡತ ತೀರಗಳಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದ್ದು ಪ್ರವಾಸಿಗರನ್ನು ಕಡಲಿನಿಂದ ದೂರ ಇರಲು ಸೂಚಿಸಲಾಗಿದೆ.
ಸದ್ಯ ಘಟನೆ ನಡೆದಿರುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.