ಹೆಬ್ರಿ, ಫೆ.04 (DaijiworldNews/AA): ಪಶ್ವಿಮಘಟ್ಟ ತಪ್ಪಲು ತೀರಾ ಪ್ರದೇಶಗಳಲ್ಲಿ ನಕ್ಸಲ್ ಚಳುವಳಿಯು 2002-03ರ ಹೊತ್ತಿಗೆ ಶುರುವಾಗಿದ್ದು, 2003 ನವಂಬರ್ 17ರಂದು ಕಾರ್ಕಳ ತಾಲೂಕು ಈದು ಗ್ರಾಮದ ಬೊಲ್ಲೊಟ್ಟು ರಾಮಪ್ಪ ಪೂಜಾರಿಯ ಮನೆಯಲ್ಲಿ ಪೊಲೀಸರು ನಡೆಸಿದ ಎನ್ಕೌಂಟರ್ಗೆ ಪಾರ್ವತಿ, ಹಾಜಿಮ್ಮ ಬಲಿಯಾಗಿ ಯಶೋಧಾ ಕೂದಲೆಳೆಯ ಅಂತರದಲ್ಲಿ ಬದುಕುಳಿಯುವ ಮೂಲಕ ನಕ್ಸಲ್ ಹೋರಾಟ ತಳಮಟ್ಟದಲ್ಲಿ ನೆಲೆಯೂರಿರುವುದು ದೃಢಪಟ್ಟಿತ್ತು.



ಕುದುರೆಮುಖ ರಕ್ಷಿತಾರಣ್ಯ ಪ್ರದೇಶ ಹಾಗೂ ಅದಕ್ಕೆ ತಾಗಿಕೊಂಡಿರುವ ಕೆಲ ಗ್ರಾಮಗಳನ್ನು ನಕ್ಸಲ್ಪೀಡಿತ ಪ್ರದೇಶವೆಂದು ಅಂದು ಸರಕಾರವು ಘೋಷಿಸಿತು. ನಕ್ಸಲ್ ಚಳುವಳಿಗೆ ಕಾರಣವಾಗಿದ್ದ ಪ್ರದೇಶ ಅಭಿವೃದ್ಧಿಯನ್ನು ಪೀಠಿಕೆಯಾಗಿಟ್ಟ ಸರಕಾರವು ಲಕ್ಷಾಂತರ ಅನುದಾನ ಬಿಡುಗಡೆಗೊಳಿಸಿತು. ಕುದುರೆಮುಖ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ತಲಾತಲಾಂತರ ವರ್ಷಗಳಿಂದ ಬಾಳಿ ಬದುಕಿ ಬಂದಿದ್ದ ಆನೇಕ ಕುಟುಂಬಗಳ ಬದುಕು ತೂಗುಗತ್ತಿಯಂತಿತ್ತು.
ಮಲೆಕುಡಿಯ ಜನಾಂಗದವರ ಬವಣೆ
ಹೆಬ್ರಿ ತಾಲೂಕಿನ ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಂಡಾರು ಗ್ರಾಮದ ಮುಟ್ಲುಪ್ಪಾಡಿ ಮೊರಂಟೆಬೈಲು ಪ್ರದೇಶದಲ್ಲಿ ನೆಲೆಸಿರುವ ಮಲೆಕುಡಿಯ ಸಮಾಜದವರ ಬವಣೆ ಶೋಚನೀಯವಾಗಿದೆ.
ಮುಟ್ಲುಪ್ಪಾಡಿಯಿಂದ ಸುಮಾರು 5 ಕಿ.ಮೀ ದೂರುದಲ್ಲಿ ಮಲೆಕುಡಿಯ ಸಮಾಜದ 3 ಕುಟುಂಬಗಳು ವಾಸವಾಗಿದ್ದು, ಇವರು ಮನೆಗೆ ಹೋಗಬೇಕಾದಾರೆ ಕಾಲುದಾರಿಗೆ ಗತಿ. ಹಲವು ವರ್ಷಗಳಿಂದ ಈ ಕುಟುಂಬದವರು ತಮ್ಮ ಬೇಡಿಕೆಯನ್ನು ಸಲ್ಲಿಸುತ್ತಾ ಬಂದಿದ್ದರೂ, ಯಾವುದೇ ಪ್ರಗತಿ ಕಂಡಿರಲಿಲ್ಲ. ಆದರೂ ಛಲ ಬಿಡದ ಸಮಾಜದ ಮುಂದಾಳುಗಳು ಕಾನೂನು ರೀತ್ಯಾದಲ್ಲಿ ಈ ಕುರಿತು ಹಲವು ಸಭೆಗಳಲ್ಲಿ ಪ್ರಾಸ್ತಾಪಿಸುತ್ತಾ ಬಂದಿದ್ದು ಮಾತ್ರವಲ್ಲದೇ ವಿವಿಧ ಸ್ತರಗಳಲ್ಲಿ ಮನವಿ ಪತ್ರ ಸಲ್ಲಿಸುತ್ತಾ ಬಂದಿದ್ದರು.
ಕೂಡಿಬಂದ ಕಾಲ
ಕುದುರೆಮುಖ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯೊಳಪಟ್ಟ ಮುಟ್ಲುಪ್ಪಾಡಿ-ಮೊರಂಟೆಬೈಲು ಸಂಪರ್ಕ ರಸ್ತೆ ನಿರ್ಮಾಣದ ಮೊದಲಹಂತದ ಕಾಮಗಾರಿ 2025 ಫೆಬ್ರವರಿ 04ರಂದು ಶುರುವಾಗಿದೆ. 5 ಕಿ.ಮೀ ದೂರದಲ್ಲಿ ಇರುವ ಮಲೆಕುಡಿಯ ಸಮಾಜದ 3 ಮನೆಗಳ ಸಂರ್ಪಕ ರಸ್ತೆಯನ್ನು ಜೆಸಿಬಿ ಮೂಲಕ ಆರಂಭಸಿದ್ದು, ಸುಮಾರು 4 ಕಿ.ಮೀ ತನಕ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಆ ಮೂಲಕ ಇವರು ತಮ್ಮ ಮನೆಯ ಕಡೆಗೆ ವಾಹನಗಳಲ್ಲಿ ತೆರಳುವುದಕ್ಕೆ ಅವಕಾಶ ದೊರೆಯುತ್ತದೆ.
ಜೋಲಿಯೇ ಆಸರೆಯಾಗಿತ್ತು!
ಮುಟ್ಲುಪ್ಪಾಡಿಯ ಮೊರಂಟಬೈಲು ಪ್ರದೇಶದಲ್ಲಿ ನೆಲೆಸಿರುವ ಮಲೆಕುಡಿಯ ಸಮಾಜ ಕುಟುಂಬದಲ್ಲಿ ಓರ್ವ ಹುಡುಗಿ ಅಂಗವಿಕಲಚೇತನದಿಂದ ಬಳಲುತ್ತಿದ್ದು, ಅನಾರೋಗ್ಯಕ್ಕೊಳಗಾದ ಸಂದರ್ಭದಲ್ಲಿ ಆಕೆಯನ್ನು ಹಾಡಿಮೇಲು ಮೂಲಕ ಜೋಲಿಯಲ್ಲಿ 5 ಕಿ.ಮೀ ದೂರದ ವರೆಗೆ ಹೊತ್ತು ಸಾಗಬೇಕು. ಇಂತಹ ಪರಿಸ್ಥಿತಿಯು ಅನಾರೋಗ್ಯಕ್ಕೆ ತುತ್ತಾದ ಹಾಗೂ ಹಿರಿವಯಸ್ಸಿನವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದರೆ ಎದುರಾಗುತ್ತದೆ.
ಜಿಲ್ಲಾಡಳಿತದ ಕಾರ್ಯದಕ್ಷತೆ
ಮಲೆಕುಡಿಯ ಸಮಾಜದ ಮುಖಂಡರುಗಳ ಸತತ ಪ್ರಯತ್ನಕ್ಕೆ ಉಡುಪಿ ಜಿಲ್ಲಾಡಳಿತವು ಸಕರಾತ್ಮಕವಾಗಿ ಸ್ಪಂದನೆ ನೀಡಿದೆ. ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಶಿವರಾಮ ಬಾಬು, ಆರ್ ಎಫ್ ಓ ಶಶಿಧರ್ ಪಾಟೀಲ್, ಪಾರೆಸ್ಟರ್ ಅಭಿಲಾಷ್, ಐಟಿಡಿಪಿಯ ನಾರಾಯಣ ಸ್ವಾಮಿ ಅವರ ಸಹಕಾರದೊಂದಿಗೆ ಶತಮಾನದ ಕನಸ್ಸು ನನಸಾಗಿದೆ.
ಸಂತಸ ವ್ಯಕ್ತಪಡಿಸಿದ ಮಲೆಕುಡಿಯ ಸಂಘ
ಹಲವು ಬಾರಿ ಕಾನೂನು ರೀತ್ಯಾದಲ್ಲಿ ಮೂಲ ಸೌಕರ್ಯಕ್ಕಾಗಿ ಹೋರಾಟ ನಡೆಸಿ ಬಂದಿದ್ದು, ಅದಕ್ಕೆ ಉಡುಪಿ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದನೆ ನೀಡಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮಲೆಕುಡಿಯ ಜನಾಂಗದವರು ನೆಲೆಸಿರುವ ಪ್ರದೇಶದಲ್ಲಿ ಈಗಾಗಲೇ ರಸ್ತೆ ನಿರ್ಮಾಣ ಕಾರ್ಯ ನಡೆದಿರುತ್ತದೆ.
ಈದು ಗ್ರಾಮದ ನೂರಾಲ್ಬೆಟ್ಟುವಿನ ಕನ್ಯಾಲು, ಕಬ್ಬಿನಾಲೆಯ ಮುತ್ತಾವು, ಮುಂಡಾನಿ-ಬೀರಬೆಟ್ಟು, ಬೇರ್ಕಳದ ಭೋಜಗೌಡ ಮನೆ(ಏಕ ಮನೆ)ಯ ವರೆಗೆ 2 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದೆ ಎಂದು ಉಡುಪಿ ಜಿಲ್ಲಾ ಮಲೆ ಕುಡಿಯ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾಡಳಿತ,ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ಸದಸ್ಯ ಗಂಗಾಧರ ಗೌಡ ಮಾಹಿತಿ ನೀಡಿ ಸಂಸತ ವ್ಯಕ್ತಪಡಿಸಿದ್ದಾರೆ.
ನಕ್ಸಲ್ ಹೋರಾಟ..
2003 ನವಂಬರ್ 17ರಂದು ಈದು ಎನ್ಕೌಂಟರ್ ನಲ್ಲಿ ಹಾಜಿಮ್ಮ, ಪಾರ್ವತಿ ಬಲಿ. ಯಶೋಧಾ ಕೂದಲೆಳೆಯ ಅಂತರದಲ್ಲಿ ಪಾರು. 2010 ಮಾರ್ಚ್ 01ರಂದು ಮುಟ್ಲುಪ್ಪಾಡಿಯ ಮೈರೋಳಿ ಎಂಬಲ್ಲಿ ಪೊಲೀಸರು ನಡೆಸಿದ್ದ ಎನ್ಕೌಂಟರ್ಗೆ ಬೆಳ್ತಂಗಡಿಯ ಕುತ್ಲೂರಿನ ವಸಂತಗೌಡ ಯಾನೆ ಆನಂದ ಬಳಿಯಾಗಿದ್ದನು.
2025 ನವಂಬರ್ 18ರಂದು ಹೆಬ್ರಿಯ ಕಬ್ಬಿನಾಲೆಯ ಪಿತ್ತುಬೈಲ್ ಎಂಬಲ್ಲಿ ಪೊಲೀಸರು ನಡೆಸಿದ ಎನ್ಕೌಂಟರಿಗೆ ನಕ್ಸಲ್ ನಾಯಕ ವಿಕ್ರಂ ಗೌಡ ಬಲಿಯಾಗಿದ್ದನು. ಪಿತುಬೈಲ್ನಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮುಟ್ಲುಪ್ಪಾಡಿ -ಮೊರಂಟೆಬೈಲು ಸಂಪರ್ಕ ರಸ್ತೆ ನಿರ್ಮಾಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದು ಗಮನಾರ್ಹವಾಗಿದೆ.