ಬಂಟ್ವಾಳ, ಫೆ.04 (DaijiworldNews/AA): ತನ್ನ ಪಿಸ್ತೂಲಿನಿಂದ ಉಂಟಾದ ಫೈರಿಂಗ್ ನಿಂದ ಕಾಂಗ್ರೆಸ್ ಮುಖಂಡರೊಬ್ಬರು ಗಾಯಗೊಂಡ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಅನಂತಾಡಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಕಾಂಗ್ರೆಸ್ ಮುಖಂಡ ಚಿತ್ತರಂಜನ್ ಶೆಟ್ಟಿ ಎಂಬವರೇ ಗಾಯಗೊಂಡವರಾಗಿದ್ದು, ಪಡೀಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಪರವಾನಗಿ ಹೊಂದಿದ್ದ ಪಿಸ್ತೂಲು ಹೊಂದಿದ್ದ ಚಿತ್ತರಂಜನ್ ಅವರು, ಮದುವೆಯೊಂದರ ಆಮಂತ್ರಣ ನೀಡಲು ಮಂಗಳವಾರ ಮಧ್ಯಾಹ್ನ ಅನಂತಾಡಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ, ಹತ್ತಿರದಲ್ಲೇ ಇದ್ದ ಜಲ್ಲಿ ಕ್ವಾರಿಗೆ ಹೋಗಿ ಅವರಿಗಾಗಿ ಕಛೇರಿಯಲ್ಲಿ ಕಾಯುತ್ತಿದ್ದರು.
ಇದೇ ವೇಳೆ ತನ್ನ ಸೊಂಟದಲ್ಲಿದ್ದ ಪಿಸ್ತೂಲನ್ನು ಬಟ್ಟೆಯಿಂದ ಒರೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ಟ್ರಿಗರ್ ಅದುಮಲ್ಪಟ್ಟು, ಅದರಿಂದ ಗುಂಡು ಸಿಡಿದು ಕಾಲಿಗೆ ಗಾಯವಾಗಿದೆ ಎಂದು ಹೇಳಲಾಗಿದೆ. ವಿಟ್ಲ ಪೊಲೀಸರು ಸ್ಥಳಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.