ಮಂಗಳೂರು, ಜೂ12(Daijiworld News/SS): ನಗರದಲ್ಲಿ ಡೆಂಗ್ಯೂ ಮತ್ತೆ ಸದ್ದು ಮಾಡುತ್ತಿದೆ. ಕಲುಷಿತ ನೀರು, ಧೂಳು, ಅನಾಫಿಲಿಸ್ ಸೊಳ್ಳೆಗಳ ಹಾವಳಿ ಸೇರಿದಂತೆ ವಿವಿಧ ಕಾರಣಗಳಿಂದ ಜಿಲ್ಲೆಯ ಜನತೆ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದೀಗ ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯೂ ಕಾಯಿಲೆಗಳಿಗೆ ತುತ್ತಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು, ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
ಮಲೇರಿಯಾ, ಡೆಂಗ್ಯೂ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲಾಖೆ ತತ್ಕ್ಷಣ ಕಾರ್ಯೋನ್ಮುಖವಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಇತ್ತೀಚೆಗೆ ಮಹಾಕಾಳಿಪಡ್ಪು ಮತ್ತು ಎಮ್ಮೆಕೆರೆ ಪ್ರದೇಶದ 300ಕ್ಕಿಂತ ಅಧಿಕ ಮನೆಗಳಿಗೆ ಭೇಟಿ ನೀಡಿದ್ದು, ಮಹಾಕಾಳಿಪಡ್ಪು ಸಮೀಪದ ಮೂರು ಪ್ರದೇಶಗಳನ್ನು ಸೇರಿ 30 ಜನರಿಗೆ ಜ್ವರ ಇರುವುದು ಗಮನಕ್ಕೆ ಬಂದಿತ್ತು. ಇದರ ಪೈಕಿ 18 ಜನರಿಗೆ ಡೆಂಗ್ಯು ಲಕ್ಷಣಗಳು ಕಂಡುಬಂದಿದ್ದು, 4 ಮಂದಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ.
ದ.ಕ ಜಿಲ್ಲೆಯಲ್ಲಿ 2019ರ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ ಒಟ್ಟು 494 ಮಲೇರಿಯಾ ಪ್ರಕರಣ ಕಂಡುಬಂದಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 470, ಮಂಗಳೂರಿನಲ್ಲಿ 16, ಬಂಟ್ವಾಳ 4, ಪುತ್ತೂರು 2, ಬೆಳ್ತಂಗಡಿ 2 ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಚಾರಿ ಮಲೇರಿಯಾ ಚಿಕಿತ್ಸಾ ಘಟಕದ ಮೂಲಕ ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ. ಕುಟುಂಬ ಸದಸ್ಯರಿಗೆ ಜ್ವರ ಕಾಣಿಸಿಕೊಂಡರೆ ತಕ್ಷಣ ಆರೋಗ್ಯ ಕೇಂದ್ರ ಅಥವಾ ವೈದ್ಯರಲ್ಲಿ ಪರೀಕ್ಷಿಸುವಂತೆ ಸೂಚನೆ ನೀಡಲಾಗಿದೆ. ಕೂಡಲೇ ಮನೆ ಬಾಗಿಲಿಗೆ ಬಂದು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಅಧಿಕಾರಿಗಳು ಮನೆಮನೆಗೆ ಭೇಟಿ ನೀಡಿ ಮಲೇರಿಯಾ ಜಾಗೃತಿ, ರಕ್ತ ಮಾದರಿ ಸಂಗ್ರಹ, ಸಮೀಕ್ಷೆ ಕೈಗೊಳ್ಳುತ್ತಿದ್ದಾರೆ. ಕರಾವಳಿಯಲ್ಲಿ ಡೆಂಗ್ಯೂ, ಮಲೇರಿಯಾ ತಡೆಗೆ ಮುಂಜಾಗ್ರತಾ ಕ್ರಮ ಮಲೇರಿಯಾ, ಡೆಂಗ್ಯೂ ಜ್ವರ ತಡೆಗಟ್ಟಲು ಜನರು ಮುನ್ನೆಚ್ಚರಿಕೆ ವಹಿಸಬೇಕು. ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು. ಸೊಳ್ಳೆಗಳು ಉತ್ಪತ್ತಿಯಾಗದಂತೆ ಜಾಗೃತಿ ವಹಿಸಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.