ಉಡುಪಿ, ಜೂ12(Daijiworld News/SS): ಕೃಷ್ಣನಗರಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥರು ಹರಿಪಾದ ಸೇರಿ ವರ್ಷ ಸಮೀಪಿಸುತ್ತಾ ಬಂದರೂ ಶ್ರೀಗಳ ವೃಂದಾವನ ನಿರ್ಮಾಣ ಕಾರ್ಯ ನಡೆದಿಲ್ಲ ಎಂದು ಶ್ರೀಪಾದರ ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಪ್ರದಾಯದಂತೆ ಮಠಾಧೀಶರು ನಿಧನರಾದಾಗ ಅವರನ್ನು ಪದ್ಮಾಸನ ರೂಪದಲ್ಲಿ ಕೂರಿಸಿ ಸಮಾಧಿ ಮಾಡಿ, ನಂತರ 12ನೇ ದಿನಕ್ಕೆ ಗುರು ಆರಾಧನೆಯನ್ನು ನೆರವೇರಿಸಿ, ಸಮಾಧಿ ಸ್ಥಳದಲ್ಲಿ ಕಲ್ಲಿನ ವೃಂದಾವನವನ್ನು ನಿರ್ಮಿಸಲಾಗುತ್ತದೆ. ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಯತಿ ಪರಂಪರೆಯಲ್ಲಿ 30ನೆಯವರಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರು (55) ಹರಿಪಾದ ಸೇರಿ ಒಂದು ವರ್ಷ ಸಮೀಪಿಸುತ್ತಿದೆ. ಆದರೆ, ಈವರೆಗೂ ಶಿರೂರು ಮಠದ ಲಕ್ಷ್ಮೀವರ ತೀರ್ಥರ ಸಮಾಧಿ ಸ್ಥಳದಲ್ಲಿ ವೃಂದಾವನವೇ ನಿರ್ಮಾಣವಾಗಿಲ್ಲ.
ಈ ಬಗ್ಗೆ ಶಿರೂರು ಶ್ರೀಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹಂಚಿಕೊಂಡಿದ್ದು, ಶಿರೂರು ಶ್ರೀಗಳು ಪಂಚಭೂತಗಳಲ್ಲಿ ಲೀನವಾದ ಹಿರಿಯಡ್ಕದ ಶಿರೂರು ಮೂಲಮಠದಲ್ಲಿ ವೃಂದಾವನ ನಿರ್ಮಾಣ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜನಪರ ಕಾರ್ಯಗಳಿಂದ, ಸಮಾಜದಲ್ಲಿ ವಿಭಿನ್ನ ರೀತಿಯಲ್ಲಿ ಎಲ್ಲಾ ವರ್ಗದವರನ್ನೂ ಮೈಗೂಡಿಸಿದ ವ್ಯಕ್ತಿ ಎಂದರೆ ಅದು ಶಿರೂರು ಶ್ರೀಗಳು. ಸಮಾಜಮುಖಿ ಕೆಲಸಗಳಿಗೆ ಕರಾವಳಿಯ ಜನರು ಶಿರೂರು ಶ್ರೀಗಳಿಗೆ ಸದಾ ತಲೆಬಾಗುತ್ತಾರೆ. ಶ್ರೀಗಳು ಕಲ್ಪಿಸಿದ ಅವಕಾಶಗಳು ಅದೆಷ್ಟೋ ಬಡ ಕುಟುಂಬಗಳಿಗೆ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಹೀಗಾಗಿ, ಲಕ್ಷ್ಮೀವರ ತೀರ್ಥರಿಗೆ ಶಿರೂರು ಮೂಲಮಠದಲ್ಲಿ ವೃಂದಾವನ ನಿರ್ಮಾಣ ಮಾಡಬೇಕು ಎಂಬ ಕೂಗು ಭಕ್ತ ವಲಯದಲ್ಲಿ ಕೇಳಿಬರುತ್ತಿದೆ.