ಕುಂದಾಪುರ, ಫೆ.03(DaijiworldNews/TA) : ಯಕ್ಷಗಾನದಲ್ಲಿ ಮುಸ್ಲಿಂ ಪಾತ್ರದ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳು ನಡೆಯುತ್ತಿರುವುದು ನಾವು ನೋಡುತ್ತಿರುತೇವೆ. ಇಂತಹ ಸಂದರ್ಭದಲ್ಲಿ ಮುಸ್ಲಿಂ ಶಿಕ್ಷಕರೋರ್ವರು ಹನುಮಂತನ ವೇಷದಲ್ಲಿ ರಂಗಸ್ಥಳದಲ್ಲಿ ಹೆಜ್ಜೆ ಹಾಕುವ ಮೂಲಕ ಯಕ್ಷ ಅಭಿಮಾನಿಗಳನ್ನ ರಂಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.

ಕುಂದಾಪುರ ತಾಲೂಕು ಹೇಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾಗಿರುವ ಅಬ್ದುಲ್ ರವೂಫ್ ಉತ್ತಮ ಶಿಕ್ಷಕರಾಗಿ ಗುರುತಿಸಿಕೊಂಡಿರುವುದು ಅಲ್ಲದೆ ಓರ್ವ ಯಕ್ಷಗಾನ ಕಲಾವಿದನಾಗಿ ಸಾಕಷ್ಟು ಹೆಸರು ಮಾಡಿದವರು. ಹವ್ಯಾಸಿ, ಯಕ್ಷಗಾನ ಸಂಘಗಳ ಪ್ರದರ್ಶನದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಬ್ದುಲ್ ರವುಫ್ ಅವರ ವೇಷ ಮತ್ತು ಅರ್ಥಗಾರಿಕೆ ಅದ್ಭುತ ಎನ್ನಬಹುದು.
ಸದ್ಯ ಬೈಂದೂರು ತಾಲೂಕಿನ ಶಿರೂರು ಶ್ರೀ ಮಹಾಸತಿ ಯುವಕ ಸಂಘದ ವತಿಯಿಂದ 25ನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಆಯೋಜಿಸಲಾದ ಶರ ಸೇತು ಬಂಧನ ಯಕ್ಷಗಾನ ಪ್ರದರ್ಶನದಲ್ಲಿ ಶಿಕ್ಷಕ ಅಬ್ದುಲ್ ರವುಫ್ ಅವರು ಹನುಮಂತನ ವೇಷ ಧರಿಸಿ ರಂಗಸ್ಥಳದಲ್ಲಿ ಹೆಜ್ಜೆ ಹಾಕಿ ರಂಜಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆಗಳ ಜೊತೆ ವೈರಲ್ ಆಗುತ್ತಿದೆ.