ಮಂಗಳೂರು, ಫೆ.01(DaijiworldNews/TA): ಅವರೆಲ್ಲಾ ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರು. ಆದ್ರೆ ದುಡಿದ ಹಣದಲ್ಲಿ ಸಮಾಜ ಸೇವೆಗಾಗಿ ಮೀಸಲಿಟ್ಟು ಸೇವಾ ಕಾರ್ಯ ನಡೆಸುತ್ತಿರುವ ಆ ತಂಡ ಮನೆಯಿಲ್ಲದವರಿಗೆ ಮನೆ,ಅನಾರೋಗ್ಯಕ್ಕೀಡಾದವರಿಗೆ ಚಿಕಿತ್ಸೆಗೆ ಹಣಕಾಸಿನ ನೆರವು, ದಿನಸಿ ಕಿಟ್ , ಆಂಬುಲೆನ್ಸ್ ಕೊಡುಗೆ ಹೀಗೆ ಹಲವು ವಿಧಧಲ್ಲಿ ಆಸರೆಯಾಗುತ್ತಿರುವ ಉದಯ ಪೂಜಾರಿ ನೇತೃತ್ವದ ಬಿರುವೆರ್ ಕುಡ್ಲ ಇದೀಗ ಕಳೆದ ಮೂರ್ನಾಲ್ಕು ವರ್ಷದಿಂದ ಫುಡ್ ಫೆಸ್ಟ್ ನಲ್ಲಿ ಭಾಗವಹಿಸಿ ಉಳಿದ ಲಕ್ಷ ಲಕ್ಷ ಲಾಭದ ಹಣವನ್ನು ಸಮಾಜದ ಬಡ ವರ್ಗಕ್ಕೆ ಮೀಸಲಿಟ್ಟು ಅರ್ಹರಿಗೆ ವಿತರಿಸುತ್ತಾ ಬರುತ್ತಿದೆ. ಈ ಬಾರಿ ಲಾಭದಲ್ಲಿ ಬಂದ 3 ಲಕ್ಷ ರೂ.ಹಣವನ್ನು ಐದು ಕುಟುಂಬಗಳಿಗೆ ಶನಿವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿತರಿಸಲಾಯಿತು.





ಇದೇ ಸಂದರ್ಭ ಆರು ಫಲಾನುಭವಿಗಳಿಗೆ ಬಿರುವೆರ್ ಕುಡ್ಲ ಹಾಗೂ ಫಿಟ್ ವೆಲ್ ಹೈಟೆಕ್ ಆರ್ಟಿಫಿಷೆಲ್ ಲಿಂಬ್ ಸೆಂಟರ್ ವತಿಯಿಂದ ವತಿಯಿಂದ 7 ಲಕ್ಷ ಮೊತ್ತದ ಕೃತಕ ಅಂಗಾಂಗ ಜೋಡಣೆ ಸಲಕರಣೆಯನ್ನು ಹಸ್ತಾಂತರಿಸಲಾಯಿತು. ವಿಧಾನಸಭಾಧ್ಯಕ್ಷ ಯು.ಟಿ ಖಾದರ್, ಬಿಜೆಪಿ ಮಾಜಿ ರಾಜ್ಯಾಧ್ಯಾಕ್ಷ ನಳಿನ್ ಕುಮಾರ್ ಕಟೀಲ್ ,ಶಾಸಕರುಗಳಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ವೈ,ಹರೀಶ್ ಪೂಂಜಾ, ಕಿಶೋರ್ ಕುಮಾರ್ ಪುತ್ತೂರು ಭಾಗವಹಿಸಿ ಅರ್ಹ ಫಲಾನುಭವಿಗಳಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಬಿರುವೆರ್ ಕುಡ್ಲ ಸಂಘಟನೆ ಹುಟ್ಟು ಹಾಕಿ ಉದಯಪೂಜಾರಿ ಬಳ್ಳಾಲ್ ಬಾಗ್ ಬಡವರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದ್ದಾರೆ.ಸಮಾಜದ ಶಕ್ತಿಯಾಗಿ ಈ ಸಂಘಟನೆ ಬೆಳೆಯಲಿ ಎಂದು ಹಾರೈಸಿದರು. ಕ್ಷೇತ್ರದ ಮೊಕ್ತೇಸರ ಸಾಯಿರಾಮ್ , ಕೋಶಾಧಿಕಾರಿ ಪದ್ಮರಾಜ್ , ಗೆಜ್ಜೆಗಿರಿ ಕ್ಷೇತ್ರದ ರವಿ ಪೂಜಾರಿ ಚಿಲಿಂಬಿ, ನಮ್ಮಟಿವಿಯ ಡಾ.ಶಿವಶರಣ್ ಶೆಟ್ಟಿ,ನಮ್ಮಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ, ಕಿಶೋರ್ ಕೆ., ಅಧ್ಯಕ್ಷರು ಕೇಂದ್ರೀಯ ಸಮಿತಿ,ರಾಕೇಶ್ ಪೂಜಾರಿ ಬಲ್ಲಾಳ್ ಭಾಗ್ಲ, ತೀಶ್ ಪೂಜಾರಿ ಬಲ್ಲಾಳ್ ಭಾಗ್, ಜಿತೇಶ್ ಜೈನ್, ದರ್ಶನ್ ಜೈನ್, ಲಿಖಿತ್ ಕೋಟ್ಯಾನ್, ರಾಕೇಶ್ ಚಿಲಿಂಬಿ, ಲೋಹಿತ್ ಗಟ್ಟಿ, ರೆನಿತ್ ರಾಜ್, ಜೀವನ್ ತಲ್ವಾರ್, ಧನ್ ರಾಜ್ ಪೂಜಾರಿ ಚಿಲಿಂಬಿ, ರಾಮ್ ಪ್ರಸಾದ್ ಎಕ್ಕೂರು, ಮನೋಜ್ ಶೆಟ್ಟಿ ಚಿಲಿಂಬಿ, ಪ್ರಜ್ವಲ್ ಶೆಟ್ಟಿ ಉಡುಪಿ, ಸಹನಾ ಕುಂದರ್ ಸೂಡಾ, ಗಿರೀಶ್ ಬತ್ತೇರಿ, ಗೌತಮ್ ಬತ್ತೇರಿ, ಗೌರವ್ ಕದ್ರಿ, ರೋಷನ್ ಮೆನೇಜಸ್, ಚರಣ್ ಅಂಚನ್ ಚಿಲಿಂಬಿ, ಬಿರುವೆರ್ ಕುಡ್ಲ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಮ್ಮನ್ನಾಳುವ ಸರ್ಕಾರಗಳು ಎಷ್ಟೇ ಯೋಜನೆಗಳನ್ನು ಜಾರಿಗೊಳಿಸಿದ್ರು ಇಂದಿಗೂ ಸಹ ಸರಿಯಾದ ಸೂರು ಇಲ್ಲದ ಅದೆಷ್ಟೋ ಕುಟಂಬಗಳು ನಮ್ಮ ಜಿಲ್ಲೆ, ರಾಜ್ಯ, ದೇಶದಲ್ಲಿವೆ. ಆದ್ರೆ ಸರ್ಕಾರದ ಯೋಜನೆಗಳಿಗೆ ಕಾಯದೆ ಸಮಾಜದಲ್ಲಿರುವ ಅಶಕ್ತರ ಬಾಳಲ್ಲಿ ಬೆಳಕು ಮೂಡಿಸುವ ಕೆಲಸವನ್ನು ಮಂಗಳೂರಿನ ಯುವಕರ ತಂಡ ಬಿರುವೆರ್ ಕುಡ್ಲ ಮಾಡುತ್ತಿದೆ. ಈ ಬಿರುವೆರ್ ಕುಡ್ಲ ಸಂಘಟನೆಯಲ್ಲಿ ನಿತ್ಯದ, ತಿಂಗಳ ಸಂಬಳಕ್ಕಾಗಿ ದುಡಿಯುವ ಯುವಕರಿಂದ ಹಿಡಿದು ಸಣ್ಣಪುಟ್ಟ ಉದ್ಯಮ ನಡೆಸುವ ಯುವಕರು ಇದ್ದಾರೆ. ಎಂಟು ವರ್ಷದ ಹಿಂದೆ ಆರಂಭಿಸಲಾದ ಈ ಸಂಘಟನೆ ಅದೆಷ್ಟೋ ಕುಟುಂಬಗಳ ಕಣ್ಣೀರು ಒರೆಸುತ್ತಾ ಬರುತ್ತಿದೆ. ಒಟ್ಟು 10ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಅಶಕ್ತ ಕುಟುಂಬಗಳ ಸಹಾಯಕ್ಕಾಗಿ ನೀಡಿದೆ.
ಮನೆ ನಿರ್ಮಾಣ ಮಾತ್ರವಲ್ಲದೆ ಪ್ರತಿ ತಿಂಗಳು ಒಬ್ಬೊಬ್ಬ ಅನಾರೋಗ್ಯ ಪೀಡಿತರ ಚಿಕಿತ್ಸೆಗಾಗಿ 50 ಸಾವಿರ ಧನ ಸಹಾಯ ನೀಡುತ್ತಾ ಬಂದಿದೆ. ಇದರ ಜೊತೆ ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಒದಗಿಸುತ್ತಿದೆ. ಈ ಸಂಘಟನೆಯಲ್ಲಿ ಮೂರು ಜಿಲ್ಲೆಯಲ್ಲಿ ಒಟ್ಟು 24 ಘಟಕಗಳಿದ್ದು ಇದರ ಸದಸ್ಯರೆಲ್ಲಾ ಒಟ್ಟು ಸೇರಿ ಸೇವಾ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದಡಿ ಈ ಯುವಕರ ತಂಡ ಸೇವೆ ಮಾಡುತ್ತಿದೆ. ತಮ್ಮ ಮನೆಯಲ್ಲಿ ಸರಿಯಾದ ಸೌಕರ್ಯವಿಲ್ಲದಿದ್ದರೂ ಸಹ ಎಲ್ಲರೂ ಒಟ್ಟು ಸೇರಿ ತಮಗಿಂತಲೂ ಕೆಳ ಹಂತದಲ್ಲಿರುವ ಬಡವರ ಕಣ್ಣೀರ ಒರೆಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ. ಒಟ್ಟಿನಲ್ಲಿ ಈ ಸಂಘಟನೆ ಮಾಡುತ್ತಿರುವ ಈ ಸೇವಾ ಕಾರ್ಯ ಇತರರಿಗೂ ಮಾದರಿಯಾಗಿ ಇನ್ನಷ್ಟು ಮಂದಿ ಅಶಕ್ತರ ಬಾಳಿಗೆ ಬೆಳಕಾಗಲಿ ಎಂಬುದೇ ನಮ್ಮ ಆಶಯ.