ಮಂಗಳೂರು, ಜ.31 (DaijiworldNews/AK):ಪ್ರಾಣಿ ಬಲಿ ಕೊಟ್ಟು ಅದರ ರಕ್ತವನ್ನು ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಮತ್ತು ಆರ್ಟಿಐ ಕಾರ್ಯಕರ್ತ ಗಂಗರಾಜು ಫೋಟೋಗೆ ಹಚ್ಚಿರುವ ವಿಡಿಯೋ ಪತ್ತೆ ಆಗಿದೆ. ಈ ಪ್ರಕರಣ ಸದ್ಯ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಂಗಳೂರಿನ ಸ್ಪಾ ಮತ್ತು ಪಾರ್ಲರ್ ಮೇಲಿನ ದಾಳಿ ಕೇಸ್ನಲ್ಲಿ ಒಂದು ವಾರದ ಹಿಂದೆ ರಾಮಸೇನಾ ಮುಖ್ಯಸ್ಥ ಪ್ರಸಾದ್ ಅತ್ತಾವರ್ ಬಂಧನವಾಗಿತ್ತು. ಪೊಲೀಸರು ಅತ್ತಾವರ ಮೊಬೈಲ್ ಫೋನ್ ಪರಿಶೀಲಿಸುತ್ತಿದ್ದಾಗ, ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜುಗೆ ಬಲ ತುಂಬಲು 5 ಕುರಿಗಳನ್ನು ಬಲಿ ಕೊಟ್ಟಿರೋ ವಿಡಿಯೋ ಬಯಾಲಾಗಿದೆ.
ಈ ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಹೇಳಿದ್ದಿಷ್ಟು:
ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಒಂದು ವಾರದ ಹಿಂದೆ ಪ್ರಸಾದ್ ಅತ್ತಾವರ ಬಂಧನ ಮಾಡಲಾಗಿತ್ತು. ಬಂಧಿತ ಪ್ರಸಾದ್ ಅತ್ತಾವರ ಮೊಬೈಲ್ಫೋನ್ ಪರಿಶೀಲನೆ ಮಾಡಿದ್ದೆವು. ಮೊಬೈಲ್ ವಿಡಿಯೋದಲ್ಲಿ ದೇವಸ್ಥಾನದಲ್ಲಿ ಬಲಿಕೊಡುವ ದೃಶ್ಯ ಇತ್ತು. ಸ್ನೇಹಮಯಿ ಕೃಷ್ಣ, ಗಂಗರಾಜು ಬಲ ತುಂಬುವುದಕ್ಕೆ ಈ ರೀತಿ ಮಾಡುತ್ತಿದ್ದರು. 5 ಕುರಿಗಳನ್ನು ಬಲಿ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಎಲ್ಲಿ ಆಗಿದ್ದೆಂದು ಸ್ಪಷ್ಟತೆ ಇಲ್ಲ, ಅನಂತ್ ಭಟ್ ಯಾರೆಂದು ತನಿಖೆ ಮಾಡ್ತಿದ್ದೇವೆ. ಪ್ರಸಾದ್ ಅತ್ತಾವರ ಮೊಬೈಲ್ ವಾಟ್ಸಾಪ್ನಲ್ಲಿ ಈ ವಿಡಿಯೋ ಇತ್ತು. ಪ್ರಾರಂಭಿಕ ಮಾಹಿತಿ ಪ್ರಕಾರ ಸ್ನೇಹಮಯಿ, ಗಂಗರಾಜುಗಾಗಿ ಮಾಡಲಾಗಿದೆ. ನಿನ್ನೆ ರಾತ್ರಿ ಸ್ವಯಂಪ್ರೇರಿತ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ಪ್ರಾಣಿಬಲಿ ಪದ್ಧತಿ ನಿಷೇಧ ಇದೆ, ಹಣದ ಬ್ಯಾಗ್ನ ಫೋಟೋ ಸಹ ಇತ್ತು. ಅನಂತ್ ಭಟ್ಗಾಗಿ ಹುಡುಕಾಟ ನಡೆಯುತ್ತಿದೆ, ತನಿಖೆಯಲ್ಲಿ ಎಲ್ಲಾ ಗೊತ್ತಾಗುತ್ತೆ. ವಾಟ್ಸಾಪ್ನಲ್ಲಿ ವಿಡಿಯೋ ಚಾಟ್ ಸಿಕ್ಕಿದೆ, ವಿಡಿಯೋ ಡಿಲೀಟ್ ಆಗಿರಲಿಲ್ಲ ಎಂದಿದ್ದಾರೆ.
ಹಣದ ಬ್ಯಾಗ್ ನ ಫೋಟೋ ಕೂಡ ಇತ್ತು, ಅದರ ಬಗ್ಗೆ ತನಿಖೆ ಮಾಡ್ತೇವೆ. ಚಾಟ್ ಪ್ರಕಾರ ಪ್ರಸಾದ್ ಅತ್ತಾವರನೇ ಇದನ್ನೆಲ್ಲಾ ಮಾಡಿಸಿದ್ದು ಅಂತ ಗೊತ್ತಾಗ್ತಿದೆ.ಅನಂತ್ ಭಟ್ ಹುಡುಕಾಟ ಆಗ್ತಿದೆ, ನಾವು ಅರೆಸ್ಟ್ ಮಾಡ್ತೀವಿ. ಯಾರಿಗೆ ಫಾರ್ವರ್ಡ್ ಮಾಡಿದ್ದಾರೋ ಅವರ ಬಗ್ಗೆಯೂ ತನಿಖೆ ಆಗಲಿದೆ. ವಿಡಿಯೋ, ಫೋಟೊ ತರಿಸಿ ಹೆಚ್ಚಿನ ತನಿಖೆ ನಡೆಸುವುದಾಗಿ ಆಯುಕ್ತರು ತಿಳಿಸಿದ್ದಾರೆ.