ಬೆಳ್ತಂಗಡಿ, ಜ.31 (DaijiworldNews/AA): ಚಲಿಸುತ್ತಿರುವಾಗಲೇ ಕೆಎಸ್ಆರ್ಟಿಸಿ ಬಸ್ಸೊಂದರ ಟಯರ್ ಕಳಚಿ ನಿಂತ ಘಟನೆ ಉಜಿರೆ ಸಮೀಪದ ಕಾಶಿಬೆಟ್ಟು ಟಿ.ಬಿ. ಕ್ರಾಸ್-ಕುಂಟಿನಿ ರಸ್ತೆಯಲ್ಲಿ ಜನವರಿ 30ರಂದು ನಡೆದಿದೆ.

ಕಳೆದೆರಡು ದಿನಗಳ ಹಿಂದೆ ಮುಂಡಾ ಸಮೀಪದ ಸೋಮಂತಡ್ಕ ಬಳಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಚರಂಡಿ ಮೇಲೆ ಹತ್ತಿದ ಘಟನೆ ಬೆನ್ನಲ್ಲೆ ಈ ಅವಘಡ ನಡೆದಿದೆ. ಧರ್ಮಸ್ಥಳ ಕೊಲ್ಲಿ ಆರ್ಗವಾಗಿ ಸಂಚರಿಸುವ ಕೆಎಸ್ಆರ್ಟಿಸಿ ಬಸ್ ಟಯರ್ ಕಳಚಿ ನಿಂತ ಆತಂಕಕಾರಿ ಘಟನೆ ಇದಾಗಿದೆ.
ಅವಘಡದ ಬಳಿಕ ಕೆಎಸ್ಆರ್ಟಿಸಿ ಸಮರ್ಪಕವಾಗಿ ಬಸ್ ನೀಡದೆ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದು, ಹೆಚ್ಚುವರಿ ಬಸ್ ಹಾಗೂ ಇತರ ಬೇಡಿಕೆ ಮುಂದಿಟ್ಟು ಬುಧವಾರ ಎಬಿವಿಪಿ ವತಿಯಿಂದ ವಿದ್ಯಾರ್ಥಿಗಳು ಉಜಿರೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೆ ಮತ್ತೆ ಬಸ್ ಟಯರ್ ಸಂಪೂರ್ಣ ಕಳಚಿ ಬೀಳುವ ಮೂಲಕ ಬಸ್ನ ಕಳಪೆ ನಿರ್ವಹಣೆಯ ಬಗ್ಗೆ ಕಳವಳ ಮೂಡಿಸಿದೆ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನು ನಿರ್ಮಾಣ ಹಂತದಲ್ಲಿದ್ದು, ರಸ್ತೆಯಲ್ಲಿನ ಹೊಂಡ ಗುಂಡಿಗಳ ಮೇಲೆ ಅತೀವೇಗದಿಂದ ನಿರ್ಲಕ್ಷ್ಯದ ಚಾಲನೆಯು ಬಸ್ಗಳು ಪದೇ ಪದೇ ಕೆಟ್ಟುಹೋಗಲು ಕಾರಣವಾಗಿದೆ. ಜೊತೆಗೆ ಗ್ರಾಮೀಣ ಭಾಗಕ್ಕೆ ಕಳಪೆ ಬಸ್ಗಳನ್ನು ಹಾಕಲಾಗುತ್ತದೆ. ಸೀಮಿತ ಸಂಖ್ಯೆಯ ಬಸ್ ಸಂಚಾರವಿರುವ ಪರಿಣಾಮ ನಿರ್ವಹಣೆಗೂ ಸಮಯವಿಲ್ಲದಂತಾಗಿದೆ. ಹಾಗೂ ಬಸ್ನಲ್ಲಿ ಮಿತಿ ಮೀರಿದ ಪ್ರಯಾಣಿಕರನ್ನು ಅನಿವಾರ್ಯವಾಗಿ ಹೇರುತ್ತಿರುವುದರಿಂದ ಬಸ್ ಅಲ್ಲಲ್ಲಿ ಕೆಟ್ಟು ನಿಲ್ಲುತ್ತದೆ. ಪರಿಣಾಮ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.