ಕಾಪು, ಜ.31 (DaijiworldNews/AA): ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ 116 ಪವನ್ ತೂಕದ ಚಿನ್ನಾಭರಣ, 100 ಗ್ರಾಂ ಬೆಳ್ಳಿ ಸಹಿತ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಉದ್ಯಾವರ ಗುಡ್ಡೆಯಂಗಡಿಯಲ್ಲಿ ನಡೆದಿದ್ದು, ಜನವರಿ 29ರಂದು ಬೆಳಕಿಗೆ ಬಂದಿದೆ.

ಉದ್ಯಾವರದ ರೇಷ್ಮಾ ತಮ್ಮ ಮಗಳೊಂದಿಗೆ ಪತಿ ಮನೆಗೆ ತೆರಳಿದ್ದು, ವಾಪಸ್ಸು ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ.
ರೇಷ್ಮಾ ಅವರು ಕಳೆದ 15 ವರ್ಷಗಳಿಂದ ಉದ್ಯಾವರ ಗ್ರಾಮದ ಗುಡ್ಡೆಯಂಗಡಿಯಲ್ಲಿರುವ ಚಂದ್ರಕಾಂತ್ ಅವರ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸ ಮಾಡಿಕೊಂಡಿದ್ದು, ಮನೆಯ ನೆಲಮಹಡಿಯಲ್ಲಿ ಮನೆಯ ಮಾಲೀಕರು ವಾಸಿಸುತ್ತಿದ್ದರು. ಮನೆ ಮಾಲೀಕರು ಜ. 14ರಂದು ಮುಂಬಯಿಗೆ ತೆರಳಿದ್ದರು. ರೇಷ್ಮಾ ಅವರು ಮಗಳೊಂದಿಗೆ ಜ. 25ರಂದು ಪರ್ಕಳದಲ್ಲಿರುವ ಗಂಡನ ಮನೆಗೆ ಹೋಗಿದ್ದರು.
ಬಳಿಕ ಜ. 29ರಂದು ಉದ್ಯಾವರದ ಮನೆಗೆ ಹಿಂದಿರುಗಿದಾಗ ಮನೆಯ ಮುಖ್ಯ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ 3 ಕಪಾಟುಗಳು ತೆರೆದಿದ್ದವು. ಈ ವೇಳೆ ಅದರೊಳಗಿದ್ದ 116 ಪವನ್ ಚಿನ್ನದ ಆಭರಣಗಳು, 100 ಗ್ರಾಂನಷ್ಟು ಬೆಳ್ಳಿಯ ದೇವರ ಸಾಮಗ್ರಿಗಳು ಹಾಗೂ 30 ಸಾವಿರ ರೂಪಾಯಿ ಕಳವಾಗಿರುವ ಬೆಳಕಿಗೆ ಬಂದಿದೆ.
ಜ. 25ರಿಂದ ಜ. 29ರ ಆಸುಪಾಸಿನಲ್ಲಿ ಈ ಕಳ್ಳತನ ಕೃತ್ಯ ನಡೆದಿದೆ. ಕಳ್ಳರು ಮನೆಯ ಮುಖ್ಯ ಬಾಗಿಲು ಮುರಿದು, ಒಳನುಗ್ಗಿ ಕೋಣೆಯ ಬಾಗಿಲ ಕೀಯನ್ನು ಮುರಿದು ಕಪಾಟಿನಲ್ಲಿದ್ದ ನಗದು ಹಣ, ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳವು ಗೈದಿರುವುದಾಗಿ ರೇಷ್ಮಾ ನೀಡಿರುವ ದೂರು ದಾಖಲಿಸಿದ್ದಾರೆ. ಅವರ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಚ್. ಸಿದ್ದಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಎಸ್ಸೆ ತೇಜಸ್ವಿ, ಶ್ವಾನದಳ, ಬೆಳರಚ್ಚು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.