ಕುಂದಾಪುರ, ಜೂ 11(Daijiworld News/SM): ಸಾಲದ ಹಣ ಮರುಪಾವತಿಯ ವಿಚಾರದಲ್ಲಿ ಕಲಹ ನಡೆದು ಆರೋಪಿಯು ವ್ಯಕ್ತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಪ್ರಕರಣದಲ್ಲಿ ಹಲ್ಲೆಕೋರನ ಅಪರಾಧವು ಸಾಬೀತಾಗಿದ್ದು ಆತನಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಲಾಗಿದೆ.
ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಅವರು ತೀರ್ಪು ಘೋಷಿಸಿದ್ದು ಅಪರಾಧಿಗೆ ಜೀವಾವಧಿ ಕಾರಾಗೃಹದ ಶಿಕ್ಷೆ ವಿಧಿಸಿದ್ದಾರೆ.
2016ರ ಜುಲೈ10ರಂದು ಶಂಕರನಾರಾಯಣ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳ್ವೆ ಗ್ರಾಮದ ಸೂರ್ಗೋಳಿಯಲ್ಲಿ ಜಲ್ಲಿ ಕ್ರಷರ್ ಮಾಡುವ ಉದ್ಯಮದ ಕೂಲಿಕಾರರ ವಸತಿ ಕೋಣೆಯಲ್ಲಿ ಪ್ರಕರಣ ನಡೆದಿತ್ತು.
ಗದಗ ಮೂಲದ ಕಾರ್ಮಿಕ ಯಲ್ಲಪ್ಪ ಹಾಗೂ ಅದೇ ಕ್ರಷರ್ ಕೇಂದ್ರದಲ್ಲಿ ಕೆಲಸ ಮಾಡುವ ಇನ್ನೊರ್ವ ಕಾರ್ಮಿಕ ರಾಜಕುಮಾರ್ ನಡುವೆ ಹಣವನ್ನು ಸಾಲವಾಗಿ ಪಡೆದು ಹಿಂತಿರುಗಿಸದ ವಿಚಾರದಲ್ಲಿ ಜಗಳವೆರ್ಪಟ್ಟಿತ್ತು. ವಾದ ವಿವಾದದಲ್ಲಿ ಹತ್ತಿರದಲ್ಲಿಯೇ ಇದ್ದ ಕತ್ತಿಯನ್ನು ತೆಗೆದುಕೊಂಡ ರಾಜ್ ಕುಮಾರ್, ಯಲ್ಲಪ್ಪನ ಮೇಲೆ ಬೀಸಿ ಮಾರಣಾಂತಿಕ ಹಲ್ಲೆ ನಡೆಸಿದ್ದ. ಈ ಬಗ್ಗೆ ಶಂಕರನಾರಾಯಣ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ತೀರ್ಪು ಇದೀಗ ಘೋಷಣೆಯಾಗಿದ್ದು, ಕೊಲೆ ಯತ್ನದ ಆರೋಪಣೆಗಳು ಸಾಭೀತಾಗಿರುವ ಹಿನ್ನಲೆಯಲ್ಲಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.